ದಾವಣಗೆರೆ: ಭಾರತ ದೇಶದಲ್ಲಿ ಯಾರೂ ಕರೆದು ನಮಗೆ ಅವಕಾಶ ಕೊಡುವುದಿಲ್ಲ. ಜ್ಞಾನ ಬೆಳೆಸಿಕೊಳ್ಳುವ ಮೂಲಕ ನಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ಕರೆ ನೀಡಿದರು.
ನಗರದ ಶ್ರೀಶೈಲ ಶಿಕ್ಷಣ ಟ್ರಸ್ಟ್, ಜಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿನ ಜಿ.ಎಂ. ಅಲ್ಲಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲವನ್ನೂ ವಿಶ್ವವಿದ್ಯಾಲಯ, ಕಾಲೇಜುಗಳಿಂದ ಮಾತ್ರ ಹೇಳಿಕೊಡಲು ಸಾಧ್ಯವಿಲ್ಲ. ತಂತ್ರಜ್ಞಾನದಲ್ಲಿ ಉನ್ನತ ಸಾಧನೆ ಮಾಡಬೇಕಾದರೆ ಜ್ಞಾನ ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.
ಪ್ರಸ್ತುತ ದೇಶ ವಿದೇಶಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಸಾಕಷ್ಟು ಅವಕಾಶಗಳು ಸಿಗುತ್ತವೆ. ಆದರೆ, ಅದೇ ರೀತಿಯಲ್ಲಿ ಉದ್ಯೋಗ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಗಂಭೀರ ಪರಿಣಾಮ ಬೀರುತ್ತದೆ. ಇನ್ನು 30ರಿಂದ 40 ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನು ಈಗಿನಿಂದಲೇ ಊಹಿಸಲು ಅಸಾಧ್ಯ. ಹಾಗಾಗಿ, ಭಾಷಾ ಪ್ರೌಢಿಮ್ಯ, ಕೌಶಲ್ಯ, ಪುಸ್ತಕ, ಪಠ್ಯೇತರ ಚಟುವಟಿಕೆ ಜ್ಞಾನ, ದೇಶ ಮತ್ತು ವಿದೇಶಗಳಲ್ಲಿನ ಆಗು ಹೋಗುಗಳ ಬಗ್ಗೆ ಪ್ರತಿನಿತ್ಯವೂ ತಿಳಿದುಕೊಳ್ಳುತ್ತಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
Read also : ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು: ಜಿಲ್ಲಾ ನ್ಯಾ.ಡಿ.ಕೆ.ವೇಲಾ
ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಅಧ್ಯಕ್ಷೆ, ಸಹಾಯಕ ಪ್ರಾಧ್ಯಾಪಕಿ ಡಾ. ಆಶಾ, ಎಂಎಲ್ ವಿಭಾಗದ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರಾದ ಕೀರ್ತಿ ಪ್ರಸಾದ್, ಫೋರಂ ಸಂಯೋಜಕರು ಮತ್ತು ಸಹಾಯಕ ಪ್ರಾಧ್ಯಾಪಕಿ ಮುಕ್ತಾ ಪೂಜಾರ್,ಕಾಲೇಜಿನ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.
