ಹರಿಹರ (Davanagere): ಮಂಡ್ಯದಲ್ಲಿ ಡಿ.20ರಿಂದ ಆರಂಭವಾಗುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡು ಬಗೆಯ ಆಹಾರ ವಿತರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕ್ರಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಆಹಾರದ ಅಸ್ಪೃಶ್ಯತೆ ದೇಶವನ್ನು, ಜನರನ್ನು ಮೇಲು ಕೀಳೆಂದು ವಿಭಜಿಸುತ್ತಿದೆ. ಕೋಮುದಳ್ಳುರಿಯಲ್ಲಿ ದೇಶ ಬೇಯುವಂತೆ ಮಾಡುತ್ತಿರುವ ದುಷ್ಟಶಕ್ತಿಗಳೇ ಆಹಾರ ಶ್ರೇಷ್ಟತೆಯ ವಿಷಬೀಜವನ್ನು ಬಿತ್ತುತ್ತಿದ್ದಾರೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ದೇಶದ ಶೇ.80ಕ್ಕೂ ಹೆಚ್ಚು ಜನ ಮಾಂಸಾಹಾರಿಗಳಾಗಿದ್ದು, ಅವರೆಂದೂ ಸಸ್ಯಾಹಾರಿಗಳನ್ನು ನಿಕೃಷ್ಟವಾಗಿ ಕಂಡಿಲ್ಲ. ಆದರೆ, ಆಹಾರದಲ್ಲಿ ಬೇಧವೆಣಿಸುವ ಮೂಲಕ ಸಸ್ಯಾಹಾರವನ್ನು ವಿಭಜಿಸಿ, ಕೋಮುವಾದ ಮತ್ತಿತರ ನೇತಾರರು ಬಹುಸಂಖ್ಯಾತರನ್ನು ಹಣಿಯುವ ಬಡಿಗೆಯನ್ನಾಗಿಸಿ ಪರಿವರ್ತಿಸಿಕೊಂಡಿದ್ದಾರೆ.
ಸಂವಿಧಾನ ಆಹಾರ ಹಕ್ಕಿನಲ್ಲಿ ಯಾವುದೇ ತಾರತಮ್ಯ ಮಾಡುವಂತ್ತಿಲ್ಲ. ನೆಲದ ಯಾವ ಕಾನೂನುಗಳು ಕೂಡ ಸಸ್ಯಾಹಾರ ಶ್ರೇಷ್ಟ ಮತ್ತು ಮಾಂಸಾಹಾರ ಕನಿಷ್ಠಎಂದು ಹೇಳಿಲ್ಲ. ಹೀಗಿರುವಾಗ ಬಹುಸಂಖ್ಯಾತರ ಮೇಲೆ ಸಸ್ಯಾಹಾರದ ಹೇರಿಕೆ ಯಾಕೆ? ಮಾಂಸಾಹಾರವನ್ನು ಸಮ್ಮೇಳನದಲ್ಲಿ ನಿಷೇಧಿಸಿರುವುದು ಏಕೆ?, ಬಹುಸಂಖ್ಯಾತರ ತೆರಿಗೆ ಹಣವನ್ನು ಪ್ರಭುತ್ವ ಇಂತಹ ಸಮ್ಮೇಳನಗಳನ್ನು ನಡೆಸಲು ವಿನಿಯೋಗಿಸುತ್ತಿಲ್ಲವೇ?, ಹಾಗಿದ್ದ ಮೇಲೆ ಈ ತಾರತಮ್ಯ ಏಕೆಂದು ಅವರು ಪ್ರಶ್ನಿಸಿದ್ದಾರೆ.
ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಲಿ. ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಇರುವಂತೆ ನೋಡಿಕೊಳ್ಳಲಿ. ಅವರು ತೆಗೆದುಕೊಳ್ಳುವ ದಿಟ್ಟ ನಿರ್ಧಾರ ‘ಕೋಮು ಸೌಹಾರ್ಧ ಕರ್ನಾಟಕ’ವಾಗಿ ಉಳಿಯಲು ಸಹಾಯ ಮಾಡುತ್ತದೆ.
ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠ ತಮಿಳುನಾಡಿನ ‘ಪಳನಿ ದೇವಸ್ಥಾನದ ಬೆಟ್ಟದ ಸುತ್ತ’ ಮಾಂಸಾಹಾರ ನಿಷೇಧಿಸಲು ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿ ಕೊಟ್ಟಿರುವ ತೀರ್ಪಿನಲ್ಲಿ “ಮಾಂಸಾಹಾರ–ಸಸ್ಯಾಹಾರ ಎಂದು ತಾರತಮ್ಯ ಮಾಡಲು ಈ ದೇಶದಲ್ಲಿನ ಯಾವ ಕಾನೂನುಗಳು ಮತ್ತು ಸಂವಿಧಾನ ಸಮ್ಮತಿಸುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿರುವುದನ್ನು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರವನ್ನು ನೀಡುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿಹಿಡಿದು ಜಿಲ್ಲಾಡಳಿತ, ಸಮ್ಮೇಳನದ ಸ್ವಾಗತ ಸಮಿತಿ ಮತ್ತು ಸರ್ಕಾರ ಮಾದರಿಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
Read also : Davanagere | ಗಾಂಜಾ ಮಾರಾಟ ಓರ್ವನ ಬಂಧನ