ಬಿ.ವಿ.ಕಕ್ಕಿಲ್ಲಾಯರ ಕೊನೆಯ ಪುಸ್ತಕ’ಮನುಷ್ಯನ ಮಹಾಯಾನ’2025 ರಲ್ಲಿ ಮತ್ತೆ ಮರುಮುದ್ರಣಗೊಂಡ ಮಹತ್ವದ ಕೃತಿ.
ಈ ಮನುಷ್ಯ ಸಮುದಾಯಗಳು ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಒಮ್ಮೆಲೆ ಬದಲಾವಣೆಗೊಂಡವುಗಳಲ್ಲ. ನಿಧಾನವಾಗಿ ಸಾಧಿಸಲಾದ ಪ್ರಗತಿ.ಆಹಾರ ಸಂಗ್ರಹಣೆಯಿಂದ ಹಿಡಿದು ಆಹಾರ ಉತ್ಪಾದ ನೆಗೆ ಮನುಷ್ಯ ಸಮುದಾಯಗಳು ಪರಿವರ್ತನೆ ಸಾಧಿಸಿದ್ದು ಮೊತ್ತ ಮೊದಲ ಕ್ರಾಂತಿ.ಕ್ರಿಸ್ತಪೂರ್ವ 5000 ರಿಂದ ಕ್ರಿಸ್ತ ಶಕ 1000 ದ ತನಕ ಜರುಗಿದ ನಾಗರಿಕತೆಗಳ ಏಳುಬೀಳುಗಳನ್ನು ಈ ಪುಸ್ತಕದಲ್ಲಿ ಲೇಖಕರು ವಿವರವಾಗಿ ಗುರುತಿಸಿದ್ದಾರೆ.
ಪುರಾತತ್ವ ಶಾಸ್ತ್ರಜ್ಞರು ಸಂಶೋಧಿಸಿದ ಪ್ರಾಚೀನ ದಾಖಲೆಗಳಲ್ಲಿ ಮೆಸೆಪೊಟೇನಿಯಾದ ದೇವಾಲಯದ ಆದಾಯ ವೆಚ್ಚಗಳ ಲೆಕ್ಕಪತ್ರ ಹಿಂದಿರುವ ಕುತೂಹಲಕರ ಮಾಹಿತಿಯನ್ನು ಲೇಖಕರು ತಿಳಿಸುತ್ತಾರೆ .
ದೇವಾಲಯವು ಮೊತ್ತಮೊದಲ ಬ್ಯಾಂಕ್ ಆಗಿತ್ತು,ಅಲ್ಲಿನ ದೇವರು ಅಂದರೆ ಆ ಸುಪರ್ದಿಗೆ ಸೇರಿದ್ದ ಭೂಮಿಗೆ ಒಡೆಯನಾಗಿದ್ದ.ಪ್ರತಿಯೊಬ್ಬ ಶ್ರಮಿಕನೂ ದೇವರಿಗೆ ಸಲ್ಲಿಸಬೇಕಾದ ಧಾನ್ಯ ಎಷ್ಟೆಂದು ನಿಗದಿ ಯಾಗಿತ್ತು. ದೇವರ ಭಂಡಾರದಿಂದ ಕೃಷಿಕರಿಗೆ ಸಾಲವಾಗಿ ಕೊಡಲಾಗಿದ್ದ ಬೀಜ ಹಾಗೂ ಉಳುಮೆಗೆ ನೀಡಿದ್ದ ಬಾಡಿಗೆ ಎತ್ತುಗಳ ಲೆಕ್ಕ ಮುಂತಾದುವು ಆ ದಾಖಲೆಗಳಲ್ಲಿ ದಾಖಲಾಗಿತ್ತು.
ಹೀಗೆ ದೇವರ ಭಂಡಾರದಿಂದ ಪಡೆದಿದ್ದನ್ನು ಸೂಕ್ತ ಸಮಯಕ್ಕೆ ಒಂದಿಷ್ಟು “ಕುಸುರಿ”ಸೇರಿಸಿ ಮರಳಿ ಕೊಡಬೇಕಾಗಿತ್ತು. ಹೀಗೆ ದೇವರು ಬಂಡವಾಳಗಾರನಾಗಿ, ಜಮೀನ್ದಾರನಾಗಿ, ದೇವಸ್ಥಾನವೇ ಆ ಊರಿನ ಅತಿ ದೊಡ್ಡ ಬ್ಯಾಂಕ್ ಆಗಿದ್ದ ವ್ಯವಸ್ಥೆಯ ಕುತೂಹಲಕರ ವಿಷಯಗಳನ್ನು ಲೇಖಕರು ತಿಳಿಸುತ್ತಾರೆ.
ಒಬ್ಬ ರಾಜನಿಗೆ ಏನಿದ್ದರೂ ಬೇಕು, ಎಷ್ಟಿದ್ದರೂ ಬೇಕು, ಅಂತನ್ನಿಸಿದಾಗ ದೇವರನ್ನು, ದೇವಸ್ಥಾನಗಳನ್ನು ದೋಚಲೆಂದೇ “ದೇವೋತ್ಪಾಟನ ಮಂತ್ರಿ”ಎಂಬುವರನ್ನು ನೇಮಿಸಿಕೊಂಡುದ್ದರ ಬಗ್ಗೆ ‘ರಾಜತರಂಗಿಣಿ’ಯನ್ನು ಉಲ್ಲೇಖಿಸುತ್ತಾರೆ.
ಈ ಕೃತಿಯ ‘ಹೊಸ ಧರ್ಮಗಳ ಮೇಲಾಟ’ಅಧ್ಯಾಯದಲ್ಲಿ, ಧರ್ಮಗಳಿಗೆ ಯುದ್ಧಗಳು ಏಕೆ ಬೇಕಾಗುತ್ತವೆ? ಯುದ್ಧಗಳಲ್ಲಿ “ಧರ್ಮಯುದ್ಧ”ಗಳು ಅಂತೇನಾದರೂ ಇರುತ್ತವೆಯೇ? ಎಲ್ಲಾ ಧರ್ಮಗಳು ಶಾಂತಿಯನ್ನು ಬೋಧಿಸುತ್ತವೆ.
Read also : ದಿನಮಾನ-ಪುಸ್ತಕ ವಿಮರ್ಶೆ|ಚಾರಿತ್ರಿಕ ಹೋರಾಟದ ಬೆಂಕಿಯ ಮಳೆ : ಬಿ.ಶ್ರೀನಿವಾಸ
ದೇವರ ಮಕ್ಕಳೊಂದಿಗೆ ಹೊಡೆದಾಟ ಆಗುವುದನ್ನು ಯಾವ ದೇವರುಗಳು ತಾನೆ ಅಪೇಕ್ಷಿಸುತ್ತವೆ? ಯುದ್ಧಗಳು ನಿಜವಾಗಿ ಸಾಮ್ರಾಜ್ಯಗಳ ವಿಸ್ತರಣೆಗಾಗಿಯೇ ವಿನಃ ಧರ್ಮಗಳ ರಕ್ಷಣೆಗೆ ಅಲ್ಲ ಎಂಬುದನ್ನು ಹೇಳುತ್ತಲೇ, ಪರಮಾಣು ಬಾಂಬ್ ಭಯೋತ್ಪಾದನೆಯ ಈ ಕಾಲದ “ಯುದ್ಧ ಧರ್ಮ”ಗಳ ಮರ್ಮವನ್ನು ಅರ್ಥ ಮಾಡಿಕೊಳ್ಳುವಂತೆ, ಯಾವ ಮತಧರ್ಮಗಳೂ ಸಹ ಶ್ರಮಜೀವಿಗಳ ಹೊಟ್ಟೆಯನ್ನು ತುಂಬಿ ಸದಿರುವುದರಿಂದ ಅವುಗಳೂ ನಿಧಾನವಾಗಿ ಅವಸಾನ ಹೊಂದುತ್ತಿವೆ.ಅಂತಿಮವಾಗಿ ಮಾನವೀಯತೆಯೊಂದೇ ಪರಮ ಧರ್ಮವಾಗಿ ಮೆರೆಯುವತ್ತ ಮನುಷ್ಯನ ಮಹಾಯಾನ ಸಾಗುತ್ತಿದೆ ಎಂಬ ಆಶಯವನ್ನು ಲೇಖಕರು ವ್ಯಕ್ತಪಡಿಸುತ್ತಾರೆ.
ಭೂಮಿಯ ಉಗಮದಿಂದ, ಜೀವಿಗಳ ವಿಕಾಸ,ಮನುಷ್ಯನ ಬೆಳವಣಿಗೆಯ ಹಂತಹಂತಗಳ ಪಯಣವನ್ನು ಅತ್ಯಂತ ವೈಜ್ಞಾನಿಕವಾಗಿ ತೆರೆದಿಟ್ಟಿದ್ದಾರೆ.ಇಲ್ಲಿ ಕಲ್ಪನೆಗಳಿಲ್ಲ,ಹತ್ತು ಹಲವು ವಿಜ್ಞಾನಿಗಳ, ಇತಿಹಾಸ ಕಾರರ ಆಧಾರ ಸಹಿತವಾದ ದಾಖಲೆಗಳಾಗಿವೆ. ಶಿವರಾಮ ಕಾರಂತರ ‘ಈ ಜಗತ್ತು’ಬರೆಹಗಳ ನಂತರ ನಾನು ಓದಿದ ವಿಜ್ಞಾನ ಮತ್ತು ಪುರಾತತ್ವ ಇತಿಹಾಸಕ್ಕೆ ಸಂಬಂಧಿಸಿದ ಇಷ್ಟದ ಪುಸ್ತಕಗಳಲ್ಲಿ ಇದೂ ಒಂದು ಹೇಳ ಬಯಸುವೆ.
ವಿಮರ್ಶೆ : ಬಿ.ಶ್ರೀನಿವಾಸ
ಮನುಷ್ಯನ ಮಹಾಯಾನ
ಲೇ:ಬಿ.ವಿ.ಕಕ್ಕಿಲ್ಲಾಯ
ನವ ಕರ್ನಾಟಕ ಪ್ರಕಾಶನ