ದಾವಣಗೆರೆ, ಜು.28 : ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಸಂವಿಧಾನ ಬದ್ಧತೆಯ ಆಶಯವಾಗಿದ್ದು, ಅದನ್ನು ಕಾರ್ಯ ರೂಪಕ್ಕೆ ತರಬೇಕಾದುದು ಆಳುವವರ ಜವಾಬ್ಧಾರಿಯೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ನಗರದ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂಸ್, ರಗ್ಗು, ಹೊದಿಗೆ ಇತರೆ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಂದು ಅಭೂತಪೂರ್ವ ಬದಲಾವಣೆ ತಂದಿದ್ದು, ಶಿಕ್ಷಣದಿಂದ ದೂರವಿದ್ದಂತಹ ಪರಿಶಿಷ್ಟ ಮಕ್ಕಳೂ ಈಗ ಶೈಕ್ಷಣಿಕ ಸಾಧನೆ ಮಾಡುತ್ತಿರುವುದು ಗಮನಾರ್ಹ ಎಂದರು.
ಮಕ್ಕಳಿಗೆ ಶಿಕ್ಷಣ ನೀಡಬೇಕಾದುದು ಯಾವುದೇ ರಾಜ್ಯ, ದೇಶದ ಜವಾಬ್ಧಾರಿಯಾಗಿದೆ. ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಮೂಲಕ ಆತ್ಮೀಯರಾದ ಬಿ.ಎಚ್.ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ ಸೇರಿದಂತೆ ಸಮಿತಿ, ಸಮಾಜದ ಮುಖಂಡರು ಮಕ್ಕಳಿಗೆ ಶಿಕ್ಷಣ ನೀಡಲು, ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಇತರೆ ಪರಿಕರ ನೀಡುವ ಮೂಲಕ ಮಾದರಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸರಳ, ಶೈಕ್ಷಣಿಕ, ಮಕ್ಕಳಿಗೆ ಪೂರಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಮಗೆ ಖುಷಿ ತಂದಿದೆ ಎಂದು ಅವರು ಹೇಳಿದರು.
ಸಮುದಾಯವೂ ಇಂತಹ ಶೈಕ್ಷಣಿಕ ಕಾರ್ಯಕ್ಕೆ ಕೈಜೋಡಿಸಬೇಕು. ಹಿರಿಯರು, ದಾನಿಗಳು, ಸಮಾಜದ ಮುಖಂಡರ ನೆರವಿನಿಂದ ಇಂತಹ ಕಾರ್ಯ ಕೈಗೊಂಡಿದ್ದು, ಇತರರಿಗೂ ಪ್ರೇರಣೆಯಾಗಿದೆ. ಇಲ್ಲಿ ಓದುವಂತಹ ವಿದ್ಯಾರ್ಥಿಗಳು ಉನ್ನತ ಸಾಧನೆ ಮೆರೆಯಬೇಕು. ಇಂದು ಮಕ್ಕಳ ಭವಿಷ್ಯ ಬೇರೆ ಯಾರ ಕೈಯಲ್ಲೂ ಇಲ್ಲ. ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ತಮ್ಮ ಭವಿಷ್ಯ ತಮ್ಮ ಕೈಯಲ್ಲೇ ಇದೆಯೆಂಬುದನ್ನು ಅರ್ಥ ಮಾಡಿಕೊಂಡು, ಉನ್ನತ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಂಘದ ಕಾರ್ಯದರ್ಶಿ, ಸಮಾಜದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಹರಿಜನ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂಕಲ್ಪದೊಂದಿಗೆ ಇಲ್ಲಿನ ಹಿರಿಯರಿಗೆ ಷರತ್ತು ವಿಧಿಸಿ, ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1934ರಲ್ಲಿ ದಾವಣಗೆರೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಂದಿದ್ದರು. ಅಂದು ಗಾಂಧೀಜಿ ಚೌಕಾಕಾರದಲ್ಲಿ ಸಾಗಿದ ಜಾಗವೇ ಇಂದು ಸಂಸ್ಥೆಯ ಕಾಂಪೌಂಡ್ ಇರುವ ಜಾಗ. ಅಷ್ಟೂ ಜಾಗವನ್ನು ಹರಿಜನರ ಮಕ್ಕಳ ಶೈಕ್ಷಣಿಕ ಕಾರ್ಯಕ್ಕಾಗಿ ಕೊಡಿಸಿದ ಮಹಾತ್ಮ ಗಾಂಧೀಜಿ ಸಂಕಲ್ಪ ಸಾಕಾರಗೊಳ್ಳುತ್ತಿದೆ ಎಂದರು.
ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಡಾ.ಬಿ.ಎಂ.ತಿಪ್ಪೇಸ್ವಾಮಿ ಸಂಯುಕ್ತ ಪಿಯು ಕಾಲೇಜು ಸೇರಿದಂತೆ ಒಂದಿಷ್ಟು ಸಮಸ್ಯೆಗಳಿವೆ. ಅದು ಸರ್ಕಾರದ ಮಟ್ಟದಲ್ಲೇ ಪರಿಹಾರ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆ, ಸಮಾಜದ ಮುಖಂಡರ ನಿಯೋಗವು ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ನಿಯೋಗ ಬರಲಿದ್ದೇವೆ. ಆಗ ಗೃಹ ಸಚಿವರಾದ ಡಾ.ಜಿ.ಪರಮೇಶ್ವ ರ ಸಂಸ್ಥೆಗೆ ಕಾಲೇಜು ಮಂಜೂರು ಮಾಡಿಸಿಕೊಡಬೇಕು. ಕಾಲೇಜನ್ನೇ ಅವಲಂಭಿಸಿದ 14-15 ಬೋಧಕರ ಜೀವ, ಬದುಕಿನ ಪ್ರಶ್ನೆಯೂ ಆಗಿದೆ. ಯಾರೇ ಕೈಬಿಟ್ಟರೂ ಡಾ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರವರು ನಮ್ಮ ಕೈಬಿಡಬಾರದು ಎಂದು ಅವರು ಮನವಿ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಎಸ್.ವಿಜಯಕುಮಾರ, ಸಂಘದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ಉಪಾಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಂಟಿ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಪೇಪರ್ ಕೆ.
ಚಂದ್ರಣ್ಣ, ಸದಸ್ಯರಾದ ಗಂಗಾಧರಪ್ಪ, ಬಿ.ಎಂ.ಈಶ್ವರಪ್ಪ ಗಾಂಧಿ ನಗರ, ಎಲ್.ಎಂ.ಎಚ್.ಸಾಗರ್, ಹಿರಿಯ ವಕೀಲ ಮಂಜಪ್ಪ ಹಲಗೇರಿ, ನಾಗರಾಜಪ್ಪ ಆದಾಪುರ, ಜಿ.ಎನ್.ಸಂತೋಷ, ಯುವ ಮುಖಂಡ ರಾಕೇಶ ಇತರರು ಇದ್ದರು. ಶಾಲೆಯ ಹಳೆಯ ವಿದ್ಯಾರ್ಥಿ, ವರದಿಗಾರರ ಕೂಟದ ನೂತನ ಅಧ್ಯಕ್ಷ, ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಜಿಲ್ಲಾ ಪೊಲೀಸ್ ಅಧೀ ಕ್ಷಕಿ ಉಮಾ ಪ್ರಶಾಂತರನ್ನು ಸಂಸ್ಥೆ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸನ್ಮಾನಿಸಿದರು.
ಇದೇ ವೇಳೆ 85 ಮಕ್ಕಳಿಗೆ ಸಮವಸ್ತ್ರ ಇತರೆ ಪರಿಕರ ವಿತರಿಸಲಾಯಿತು.