ದಾವಣಗೆರೆ: ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನ, ಶ್ರೀ ವಾಸವಿ ಪೀಠಂನ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಯವರ 4ನೇ ಪೀಠಾರೋಹಣದ ಹಿನ್ನಲೆಯಲ್ಲಿ ಬುಧವಾರ ಪುರಪ್ರವೇಶ ಮಾಡಿದರು.
ಸಮಾಜದ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳನ್ನು ಮುಖಂಡರು, ಸಮಾಜ ಬಾಂಧವರು, ಬೈಕ್ ರ‍್ಯಾಲಿ ಮೂಲಕ ಭಕ್ತಿಯಿಂದ ಸ್ವಾಗತಿಸಿದರು.
ಪರಮಪೂಜ್ಯ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರನ್ನು, ಬಾಡಾ ಕ್ರಾಸ್ ಬಳಿ ಸಮಾಜದ ಮಹಿಳೆಯರು ಪೂರ್ಣಕುಂಭದೊಂದಿಗೆ ಎದುರುಗೊಂಡು, ಸ್ವಾಗತಿಸಿದರು. ನಂತರ ರ‍್ಯಾಲಿ ಮೂಲಕ ಅವರಗೆರೆಯ ಗೋಶಾಲೆ ತಲುಪಿತು. ಶ್ರೀಗಳು ಕಾಮಧೇನು ಎಂದೇ ಕರೆಯುವ ಗೋಮಾತೆಗೆ ವಸ್ತ್ರ ಸಮರ್ಪಿಸಿ, ಗೋಪೂಜೆ ನೆರವೇರಿಸಿದರು. ನಂತರ ಗೋವುಗಳಿಗೆ ಗೋಗ್ರಾಸ ನೀಡಲಾಯಿತು. ಇದೇ ವೇಳೆ ಗೋಶಾಲೆಯ ಆವರಣದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.
ಸುಮಾರು 250 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ 20ಕ್ಕೂ ಹೆಚ್ಚು ಕಾರುಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು, ‘ಕೇಸರಿ ಪೇಟ’ ತೊಟ್ಟು, ವಾಹನಗಳಿಗೆ ‘ವೈಶ್ಯ ಪತಾಕೆ’ ಕಟ್ಟಿಕೊಂಡು, ‘ಜೈ ವಾಸವಿ ಮಾತಾ’, ‘ಜೈ ಕನ್ಯಕಾಂಬಾ’ ಎಂದು ಆರ್ಯವೈಶ್ಯ ಕುಲದೇವತೆ ಶ್ರೀ ಕನ್ಯಕಾಪರಮೇಶ್ವರಿ ಮಾತೆಯನ್ನು ಸ್ತುತಿಸುತ್ತಾ ಶಿಸ್ತಿನಿಂದ ಮುಂದೆ ಸಾಗಿದರು.
ರ‍್ಯಾಲಿಯು ಅವರಗೆರೆ, ಪಿ.ಬಿ. ರಸ್ತೆ ಮೂಲಕ ಸಾಗಿ ಎ.ವಿ.ಕೆ. ಕಾಲೇಜು ರಸ್ತೆ, ರಾಂ ಅಂಡ್ ಕೋ ವೃತ್ತ, ಚರ್ಚ್ ರಸ್ತೆ ಮೂಲಕ ನೇರ ರಿಂಗ್ ರಸ್ತೆ, ಗಡಿಯಾರ ವೃತ್ತ, ಶ್ರೀ ಶಾರದಾಂಬ ದೇವಸ್ಥಾನ ರಸ್ತೆಯ ಮೂಲಕ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣ ರಸ್ತೆಯಲ್ಲಿ ಸಾಗಿ, ಶ್ರೀಗಳು ತಂಗುವ ಆರ್.ಜಿ. ಶ್ರೀನಿವಾಸಮೂರ್ತಿ ಅವರ ನಿವಾಸದ ಬಳಿ ರ‍್ಯಾಲಿ ಮುಕ್ತಾಯವಾಯಿತು.
Read also : ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
ಈ ವೇಳೆ ಜಿಲ್ಲಾ ಸಮಿತಿ ಹಾಗೂ ಭಕ್ತಿ ಸಿಂಚನ ಸಮಿತಿಯ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿ ಎಂ. ನಾಗರಾಜ ಗುಪ್ತ, ಆರ್ಯವೈಶ್ಯ ಮುಖಂಡ ಎಸ್.ಟಿ. ಕುಸುಮ ಶ್ರೇಷ್ಠಿ, ಡಾ. ಬಿ.ಎಸ್. ನಾಗಪ್ರಕಾಶ್, ಕೆ.ಎಸ್. ರುದ್ರಶ್ರೇಷ್ಠಿ, ಆರ್.ಜಿ. ಶ್ರೀನಿವಾಸ್ ಮೂರ್ತಿ, ಕೆ.ಎನ್. ಅನಂತರಾಮ ಶೆಟ್ಟಿ, ಹೆಚ್.ಟಿ. ಶ್ರೀನಿವಾಸ್, ಬಿ.ಹೆಚ್. ಅಶೋಕ್, ಎಸ್. ಸುನೀಲ್, ಟಿ.ಎಸ್. ಕಿರಣ್ ಕುಮಾರ್, ಕೆ.ಎಸ್. ದರ್ಶನ್, ಜೆ. ರವೀಂದ್ರ ಗುಪ್ತ, ಹೆಚ್. ವೆಂಕಟೇಶ್, ಡಿ.ಹೆಚ್. ಅಂಬಿಕಾಪತಿ ಶೆಟ್ಟಿ, ಸಾಯಿಪ್ರಸಾದ್, ಎನ್.ವಿ.ಬದರಿನಾಥ್, ಟಿ. ಸುರೇಶ್ ಉಪಸಮಿತಿಗಳ ಚೇರ್ಮನ್ನರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಗುರುವಾರ ಶೋಭಾಯಾತ್ರೆ, ‘ಭಕ್ತಿ ಸಿಂಚನ’ ಕಾರ್ಯಕ್ರಮ
ಗುರುವಾರ ಬೆಳಗ್ಗೆ ದಾವಣಗೆರೆ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ‘ಭಕ್ತಿ ಸಿಂಚನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7.30 ಕ್ಕೆ ಶ್ರೀ ಸದ್ಯೋಜಾತ ಸ್ವಾಮಿ ಹಿರೇಮಠದಿಂದ ಶ್ರೀಗಳನ್ನು ಸುವರ್ಣ ರಥದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಿವಿಧ ಕಲಾತಂಡಗಳನ್ನು ಒಳಗೊಂಡ ಶೋಭಾಯಾತ್ರೆ ಮೂಲಕ ಸಮಾಜ ಬಾಂಧವರು ಕರೆತರಲಿದ್ದಾರೆ. ನಂತರ ಕಾರ್ಯಕ್ರಮದ ಉದ್ಘಾಟನೆ, ಶ್ರೀಗಳಿಂದ ಆಶೀರ್ವಚನ ಸೇರಿದಂತೆ ದಿನಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.