ದಾವಣಗೆರೆ, ಆ.20 (Davanagere ) : ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರು ಉಳುವವನಿಗೆ ಭೂ ಒಡೆತನವನ್ನು ನೀಡುವ ಮೂಲಕ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು ಎಂದು ಲೋಕಸಭಾ ಸದಸ್ಯರಾದ ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಮಂಗಳವಾರ ದಾವಣಗೆರೆ-ಹರಿಹರ ರಸ್ತೆಯಲ್ಲಿನ ರಾಯಣ್ಣ ಸರ್ಕಲ್ ಬಳಿ ಇರುವ ಡಿ. ದೇವರಾಜು ಅರಸುರವರ ಪ್ರತಿಮೆಗೆ ಮಲಾರ್ಪಣೆ ಮೂಲಕ ಗೌರವ ನಮನ ಸಲ್ಲಿಸಿ ನಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ದಾವಣಗೆರೆ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ನೌಕರರ ಸಮುದಾಯದಲ್ಲಿ ಆಯೋಜಿಸಲಾದ ಡಿ. ದೇವರಾಜು ಅರಸುರವರ 109ನೇ ಜನ್ಮ ದಿನಾಚರಣೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರಸುವರು ಮುಖ್ಯಮಂತ್ರಿಯಾಗಿ ಅನೇಕ ಸುಧಾರಣಾ ಕಾರ್ಯಕ್ರಮಗಳ ಜೊತೆಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಲಯಗಳ ಪರಿಕಲ್ಪನೆಯನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಆಡಳಿತವನ್ನು ಅತ್ಯುತ್ತಮವಾಗಿ ನಡೆಸುವ ಮೂಲಕ ಬಡವರು, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ವಿಶೇಷ ಗಮನ ನೀಡುವ ಮೂಲಕ ರಾಜ್ಯದ ಆಡಳಿತವನ್ನು ಮುನ್ನಡೆಸಿ ಅರಸು ಧ್ವನಿ ಇಲ್ಲದವರ ಧ್ವನಿಯಾದರು.
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾದಾಗ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಉಳುವವನೇ ಭೂ ಒಡೆಯ ಎಂಬ ಯೋಜನೆ ತಂದರು. ವಿಧಾನಸೌಧದ ಮೆಟ್ಟಿಲು ಹತ್ತದವರನ್ನು ವಿಧಾನಸೌಧಕ್ಕೆ ಬರುವ ಹಾಗೆ ಮಾಡಿದರು, ಹಾಗೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಜಾರಿ ಮಾಡಿದರು.
ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಶೈಕ್ಷಣಿಕ ಅರಿವು ಸಾಲ, ಸ್ವ ಉದ್ಯೋಗಕ್ಕಾಗಿ ಮತ್ತು ಆರ್ಥಿಕ ಸ್ವಾವಲಂಭನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಈ ವರ್ಗದ ಜನರ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಮಾಯಕೊಂಡ ಕ್ಷೇತ್ರ ಶಾಸಕರಾದ ಕೆ.ಎಸ್ ಬಸವಂತಪ್ಪ ಮಾತನಾಡಿ, ಡಿ. ದೇವರಾಜು ಅರಸು ದಕ್ಷ ಆಡಳಿತಗಾರರಾಗಿ ಎಸ್.ಸಿ, .ಎಸ್.ಟಿ ಹಾಗೂ ಹಿಂದುಳಿದ ವರ್ಗದ ಏಳಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರು. ನಾವುಗಳು ನಮ್ಮ ಅಕ್ಕ ಪಕ್ಕದ ಮನೆಯ ಮಕ್ಕಳಿಗೆ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸಿ ಸಹಾಯ ಮಾಡಿದರೆ ಮುಂದೊಂದಿನ ಪ್ರತಿಯೊಂದು ಮನೆಯಲ್ಲೂ ಒಬ್ಬ ದೇವರಾಜು ಅರಸು, ಡಾ; ಬಿ.ಆರ್.ಅಂಬೇಡ್ಕರ್ ಅಂತಹ ಪ್ರತಿಭೆಗಳು, ಮಹಾನ್ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಅರಸು ಅವರು ಜಾರಿಗೊಳಿಸಿದ ಯೋಜನೆಗಳಿಂದಾಗಿ ಅವರನ್ನು ಸದಾ ನೆನೆಯುತ್ತೇವೆ. ಆಡಳಿತ ಸಂದರ್ಭದಲ್ಲಿ ಸರ್ವ ಜನಾಂಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಭೂ ಸುಧಾರಣೆ, ಜೀತ ಪದ್ಧತಿ, ಆರ್ಥಿಕ ಸಮಸಮಾಜಕ್ಕಾಗಿ ಕಾನೂನುಗಳನ್ನು ಜಾರಿಗೆ ತಂದಿದ್ದರಿಂದ ರಾಜ್ಯದ ಎಲ್ಲ ವರ್ಗದವರಿಗೆ ಅನುಕೂಲವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ್ ಕಲಮರಹಳ್ಳಿ ಉಪನ್ಯಾಸ ನೀಡಿದರು. ಬಿಸಿಎಂ ಅಧಿಕಾರಿ ಗಾಯತ್ತಿ ಕೆ.ಹೆಚ್. ಪ್ರಾಸ್ತವಿಕವಾಗಿ ಮಾತನಾಡಿದರು.