ಹರಿಹರ (Davanagere) : ತಾಲ್ಲೂಕಿನ ಕೆ.ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡ್ಲೆಗೊಂದಿ ಗ್ರಾಮದ ವಸತಿ ರಹಿತ ಮಾದಿಗ ಹಾಗೂ ಹಿಂದುಳಿದ ವರ್ಗದ ಕುಟುಂಬದವರಿಗೆ ಶೀಘ್ರವೇ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದರು.
ತಾಲ್ಲೂಕಿನ ಕೆ.ಬೇವಿನಹಳ್ಳಿ ಗ್ರಾಮದ ಗ್ರಾಪಂ ಕಚೇರಿಯಲ್ಲಿ ನಡೆದ ಕಡ್ಲೆಗೊಂದಿ ಗ್ರಾಮ ಸಭೆ ನಂತರ ಮಾತನಾಡಿದ ಅವರು, ಗ್ರಾಮದ ಮಾದಿಗ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 120 ವಸತಿ ರಹಿತ ಕುಟುಂಬಗಳಿವೆ. ಸಣ್ಣ, ಪುಟ್ಟ ಹೆಂಚು, ಶೀಟಿನ ಮನೆಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ, ಅನೈರ್ಮಲ್ಯ ವಾತಾವರಣದಲ್ಲಿ ಕೂಲಿಯನ್ನು ನೆಚ್ಚಿರುವ ಕುಟುಂಬಗಳು ವಾಸಿಸುತ್ತಿವೆ. ಕಡ್ಲೆಗೊಂದಿ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ಗ್ರಾಪಂ, ತಾಪಂ ಹಾಗೂ ತಾಲ್ಲೂಕು ಆಡಳಿತದವರು ಗುರುತಿಸಿದ್ದು ಆದಷ್ಟು ಬೇಗ ಮುಂದಿನ ಪ್ರಕ್ರಿಯೆಗಳನ್ನು ಮಾಡಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ವಸತಿ ಸೌಲಭ್ಯ ಒದಗಿಸಲು ಆಗ್ರಹಿಸಿ ತಾಲ್ಲೂಕು ಕಚೇರಿ ಎದುರು ತಾಲ್ಲೂಕು ಕಚೇರಿ ಎದುರು ಸಂಘಟನೆಯಿಂದ 57ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ತಾಲ್ಲೂಕು ಆಡಳಿತದ ಗಮನ ಸೆಳೆಯಲಾಗಿತ್ತು ಎಂದರು..
Read also : Davanagere news |ಕೊಡಗನೂರು ಕೆರೆ ಏರಿ ನಿರ್ಮಾಣಕ್ಕೆ 7 ಕೋಟಿ ರೂ. ಬಿಡುಗಡೆ
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಬಾಯಿ ಮಾತನಾಡಿ, ನಿರ್ವಸತಿಕರು ಈಗಾಗಲೆ ಅರ್ಜಿಗಳನ್ನು ಸಲ್ಲಿಸಿದ್ದಾರೆ, ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬಗಳಿದ್ದರೆ, ಪ್ರತ್ಯೇಕ ನಿವೇಶನಕ್ಕೆ ಆಗ್ರಹ ಕೆಳಿ ಬಂದಿದ್ದು, ಆ ಕುರಿತು ಸ್ಥಳ ಪರಿಶೀಲನೆ ಮಾಡಿ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಚರ್ಚಿಸಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದೆಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ಹಾಲೇಶ್, ಉಪಾಧ್ಯಕ್ಷೆ ಮಂಜಮ್ಮ ಮಂಜಪ್ಪ, ಸದಸ್ಯರಾದ ಲೋಕೇಶ್, ಯಶೋಧಮ್ಮ, ಜಯಪ್ಪ, ಗಿರಿಗೌಡ್ರು, ಮಾತೆಂಗೆಮ್ಮ ತಿಮ್ಮಣ್ಣ, ಮಹೇಶ್ವರಪ್ಪ ಟಿ.ಕೆ., ಗ್ರಾಮದ ಮುಖಂಡರಾದ ಸಂಜೀವ್, ಹನುಮಂತಪ್ಪ, ಬಸವರಾಜ್, ಪರಮೇಶ್, ಅಣ್ಣಪ್ಪ, ಸಾಕಮ್ಮ, ಲೋಕಪ್ಪ, ರಾಜಪ್ಪ, ಶೀಲಮ್ಮ, ಶಿವಪ್ಪ, ಮಲ್ಲಮ್ಮ, ರಂಗಪ್ಪ, ಲಕ್ಷ್ಮಣರೆಡ್ಡಿ, ರೇಣುಕಮ್ಮ, ಕೊಟ್ರೇಶಿ, ನಿಂಗಪ್ಪ ನಂದಿಗಾವಿ ಹಾಗೂ ಇತರರಿದ್ದರು.