ಹರಿಹರ : ತಾಲ್ಲೂಕಿನ ಬೆಳ್ಳೂಡಿ-ರಾಮತೀರ್ಥ ಗ್ರಾಮಗಳ ನಡುವಿನ ಸೂಳೆಕೆರೆ ಹಳ್ಳಕ್ಕೆ ಹೊಸ ಸೇತುವೆ ನಿರ್ಮಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕದಿಂದ ಹಳ್ಳದ ನೀರಲ್ಲಿ ನಿಂತು ವಿಶಿಷ್ಟವಾಗಿ ಪ್ರತಿಭಟಿಸಿದರು.
ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಹಳ್ಳದ ಈ ಭಾಗದಲ್ಲಿ ಬ್ಯಾರೇಜ್ ಕಂ ಸೇತುವೆಯ ಕಮಾನುಗಳು ಚಿಕ್ಕ ಗಾತ್ರದಲ್ಲಿರುವುದರಿಂದ 2 ವರ್ಷಗಳ ಹಿಂದೆ ಮಳೆಗಾಲದ ಪ್ರವಾಹದ ನೀರಿಗೆ ಸೇತುವೆ ಪಕ್ಕದ ಮಣ್ಣು ಕೊಚ್ಚಿ ಹೋಗಿದೆ. ಆಗಿನಿಂದಲೂ ಸೇತುವೆ ಇದ್ದೂ ಜನ, ವಾಹನ ಸಂಪರ್ಕ ಮಾಡಲಾಗುತ್ತಿಲ್ಲ. ಪರಿಣಾಮವಾಗಿ ಈ ಭಾಗದ ಹತ್ತಾರು ಗ್ರಾಮಗಳ ರೈತರು, ಕೂಲಿಕಾರರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾನುವಳ್ಳಿ, ಶಿವಮೊಗ್ಗ ಮಾರ್ಗವಾಗಿ ಏಳೆಂಟು ಕಿ.ಮೀ. ಹೆಚ್ಚುವರಿ ಸುತ್ತು, ಬಳಸಿ ಸಂಚರಿಸುವ ಶಿಕ್ಷೆ ಅನುಭವಿಸುತ್ತಿದ್ದಾರೆ.
ಈಗಿರುವ ಸೇತುವೆಯ ಕಣ್ಣುಗಳು ಕಿರಿದಾಗಿರುವುದರಿಂದ ಮಳೆಗಾಲದಲ್ಲಿ ಮರ, ಕೊಂಬೆ, ರಂಭೆ ಸಿಕ್ಕಿಕೊಳ್ಳುತ್ತವೆ, ಆಗ ನೀರಿನ ಪ್ರವಾಹ ಸೇತುವೆ ಪಕ್ಕದ ಮಣ್ಣನ್ನು ಕೊರೆದು ದಾರಿ ಮಾಡಿಕೊಳ್ಳುತ್ತದೆ. ಈ ಹಿಂದೆಯೂ ಹೀಗಾಗಿ ಹತ್ತಾರು ಲಕ್ಷ ಅನುದಾನ ಖರ್ಚು ಮಾಡಿ ದುರಸ್ತಿ ಕಾರ್ಯ ಮಾಡಿದ್ದು ನಿರುಪಯುಕ್ತವಾಗಿದೆ. ಆದ್ದರಿಂದ ಈ ಭಾಗದಲ್ಲಿ ಸುಸಜ್ಜಿತವಾಗಿ ಪೂರ್ಣ ಪ್ರಮಾಣದ ಹೊಸ ಸೇತುವೆಯನ್ನು ನಿರ್ಮಿಸಬೇಕಿದೆ. ಸಮಸ್ಯೆ ಉಂಟಾಗಿ ಎರಡು ವರ್ಷವಾದರೂ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಆಶ್ಚರ್ಯ ಮೂಡಿಸುತ್ತದೆ.
ಅನಾವಶ್ಯಕ ಯೋಜನೆಗಳಿಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡುವ ಬದಲು ಜನ ಸಾಮಾನ್ಯರಿಗೆ ಅನುಕೂಲಕರವಾದ ಈ ಸೇತುವೆ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶೀಘ್ರವೆ ಈ ಭಾಗದಲ್ಲಿ ಹೊಸ ಸುಸಜ್ಜಿತ ಸೇತುವೆ ನಿರ್ಮಿಸದಿದ್ದಲ್ಲಿ ನಮ್ಮ ಸಂಘಟನೆಯಿಂದ ಶಿವಮೊಗ್ಗ ಹೆದ್ದಾರಿ ಬಂದ್ ಮಾಡುವ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್, ಸಹಾಯಕ ಅಭಿಯಂತರ ಹನುಮಂತಪ್ಪರಿಗೆ ಮನವಿ ಸಲ್ಲಿಸಲಾಯಿತು.
ಕದಸಂಸ ಪದಾಧಿಕಾರಿಗಳಾದ ಚೌಡಪ್ಪ ಸಿ.ಭಾನುವಳ್ಳಿ, ರಮೇಶ್ ಹೊಳೆಸಿರಿಗೆರೆ, ತಿಮ್ಮಣ್ಣ ಕಡ್ಲೆಗೊಂದಿ, ಸುತ್ತಲಿನ ಗ್ರಾಮಸ್ಥರಾದ ಸಿದ್ದೇಶ್ ಪೂಜಾರ್ ಎನ್., ಎಚ್.ವಿರುಪಾಕ್ಷಪ್ಪ, ಹೊನ್ನೂರಪ್ಪ ವಿ.ಜೆ., ಎ.ಸಿದ್ದೇಶ್ವರಪ್ಪ, ಹನುಮಂತಪ್ಪ, ಎಸ್.ಪರಮೇಶ್ವರಪ್ಪ, ಎ.ಶಿವಪ್ಪ, ಆರ್.ಬಸವರಾಜ್, ಕೆ.ಮಹೇಶಪ್ಪ, ಶಿವನಗೌಡ, ಜಿ.ಸ್ವಾಮಿ, ಹಾಲೇಶಪ್ಪ, ಕೇಶವಾಚಾರಿ, ಜಿ.ಎಂ.ಮಹಾರುದ್ರಯ್ಯ, ಎಚ್.ಶೇಖರಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಕೊಟ್ರಪ್ಪ, ಮುದುಕಪ್ಪ ಹಾಗೂ ಇತರರಿದ್ದರು.
Read also : ದಾವಣಗೆರೆ ರಾಧಾಕೃಷ್ಣ ಜ್ಯುವೆಲರ್ಸ್ ನಿಂದ 1 ಲಕ್ಷ ರೂ. ಮೆಗಾ ಬಂಪರ್ ಬಹುಮಾನ ಗೆದ್ದ ವಿನಾಯಕ !