ದಾವಣಗೆರೆ (DAVANAGERE) : ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಚಿತ್ರದುರ್ಗ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ (Madara Channaiah Swamiji) ಒತ್ತಾಯಿಸಿದರು.
ಚಿತ್ರದುರ್ಗ (Chitradurga)ದ ಗುರುಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲು ಕುರಿತು ದೇಶದ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ. ಅದ್ದರಿಂದ ಸಮಿತಿಗಳ ಹೆಸರಲ್ಲಿ ಸರಕಾರ ಕಾಲಹರಣ ಮಾಡದೇ ಸೂಕ್ತ ತೀರ್ಮಾಣ ಮಾಡಬೇಕು. ಒಳ ಮೀಸಲು ಜಾರಿ ಬರೋವರೆಗೂ ಕೆಪಿಎಸ್‍ಸಿ ಸೇರಿದಂತೆ ಯಾವುದೇ ಸರಕಾರಿ ನೇಮಕಾತಿ ಮಾಡಬಾರದು ಎಂದು ಆಗ್ರಹಿಸಿದರು.
ಕೆಲವರು ಕೆನೆಪದರ ವಿಷಯ ಇಟ್ಟಕೊಂಡು ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರ ಸರಕಾರ ಕೆನೆಪದರದ ವಿಷಯ ಸುಪ್ರೀಂ ಕೋರ್ಟ್‍ನ ಅಬ್ಸರ್ವೇಶನ್ ಮಾತ್ರ. ಇದಕ್ಕೂ ಒಳ ಮೀಸಲಾತಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಅದರಿಂದ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ಹಿರಿಯ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಅಪಸ್ವರ ಎತ್ತಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಈವರೆಗೂ ಒಳ ಮೀಸಲಾತಿ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಸ್ವಾಗತಿಸಿಲ್ಲ. ಹೀಗಿರುವಾಗ ಕೆನೆಪದರದ ಬಗ್ಗೆ ಅನಗತ್ಯ ಗೊಂದಲ ಮೂಡಿ ಸುತ್ತಿರುವುದು ಸರಿಯಲ್ಲ ಎಂದರು.
ಸುಪ್ರೀಂ ಕೋರ್ಟ್‍ನ ತೀರ್ಪು ಐತಿಹಾಸಿಕವಾದುದು. ಒಳ ಮೀಲಾತಿ ಹೋರಾಟ ಮಾದಿಗ ಸಮಾಜವೇ ಮುನ್ನಡೆಸಿದರೂ ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಯ ಅನುಸಾರ ಸಾಮಾಜಿಕ ನ್ಯಾಯ ಒದಗಿಸಲಿದೆ. ಕೇವಲ ಎಸ್‍ಸಿ ಮಾತ್ರವಲ್ಲ ಎಸ್‍ಟಿ ಸಮುದಾಯದವರಿಗೂ ಇದರ ಲಾಭ ಸಿಗಲಿದೆ ಎಂದು ತಿಳಿಸಿದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ವಿಷಯವನ್ನು ನಿರ್ವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೆ ಎಂಬುದು ನಮ್ಮ ನಂಬಿಕೆ. ಮುಖ್ಯಮಂತ್ರಿಗಳು ತುರ್ತಾಗಿ ಗಮನಹರಿಸಿ, ಒಳ ಮೀಸಲು ಜಾರಿ ಮಾಡಬೇಕು’ ಎಂದು ಮನವಿ ಮಾಡಿದರು.
Read also : DAVANAGERE NEWS : ಹರ್ ಘರ್ ತಿರಂಗಾ ಕಾರ್ಯಕ್ರಮ
ಮಾದಿಗ ಮೀಸಲು ಹೋರಾಟಕ್ಕೆ ಮೂರು ಆಯಾಮಗಳಿವೆ. ಜನಾಂದೋಲನ, ಬೀದಿ ಹೋರಾಟ, ಕಾನೂನಾತ್ಮಕ ಸಂಘರ್ಷ, ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹೇರುವುದು ನಡೆದುಕೊಂಡು ಬಂದಿದೆ. ಮಾದಾರಚನ್ನಯ್ಯ ಗುರುಪೀಠ ಎಲ್ಲ ಸಂದರ್ಭಗಳಲ್ಲಿ ತನ್ನ ಇತಿಮಿತಿಯಲ್ಲಿ ಕೈ ಜೋಡಿಸಿ ಕೆಲಸ ಮಾಡಿದೆ. ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇರಲಿ, ಕೇಂದ್ರ, ರಾಜ್ಯ ಸರಕಾರಗಳಿರಲಿ ಶ್ರೀ ಮಠ ತನ್ನದೇ ಆದ ರೀತಿಯಲ್ಲಿ ಸಂಪರ್ಕವಿರಿಸಿ ಕೊಂಡು ಈ ಕಾರ್ಯ ಸಾಧನೆಯಲ್ಲಿ ತನ್ನ ಪಾತ್ರ ನಿರ್ವಹಿಸಿದೆ ಎಂದರು.
ಪಾವಗಡ ಶ್ರೀರಾಮ್‍ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ಬಂದ ಕೂಡಲೇ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್‍ರೆಡ್ಡಿ ಒಳ ಮೀಸಲು ಜಾರಿ ಮಾಡುವ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಎಲ್ಲ ಆಯೋಗಗಳು, ಅಧ್ಯಯನ ಸಮಿತಿಗಳು ಮಾದಿಗ ಸಮುದಾಯದ ಹಿಂದುಳಿದಿರುವಿಕೆ ಕುರಿತು ಸ್ಪಷ್ಟವಾಗಿ ಹೇಳಿರುವುದರಿಂದ ಸಾಮಾಜಿಕ ನ್ಯಾಯದ ಪರ ಇರುವ ಸಿಎಂ ಸಿದ್ದರಾಮಯ್ಯ ಕೂಡಲೇ ಒಳ ಮೀಸಲು ಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.