Kannada News | Dinamaana.com | 027-08-2024
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕಳೆದ ವಾರ ದಿಲ್ಲಿಗೆ ಹೋದರು. ಹೀಗೆ ಹೋದವರು ಪಕ್ಷದ ವರಿಷ್ಟರಾದ ಅಮಿತ್ ಷಾ ಮತ್ತು ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು.
ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಬಿಜೆಪಿ (BJP) ಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಸ್ತಾಪಿಸಿದ ಗೌಡರು: ಕರ್ನಾಟಕದಲ್ಲಿ ನಮ್ಮ ಪಕ್ಷ ಹೋಗುತ್ತಿರುವ ದಾರಿ ಸರಿಯಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಬದಲು ತಮಗೆ ಬೇಕಾದವರ ಮೂಲಕ ಪಕ್ಷವನ್ನು ಕಂಟ್ರೋಲಿನಲ್ಲಿಟ್ಟುಕೊಳ್ಳುವ ಕೆಲಸವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪಕ್ಷ ಕಷ್ಟಕ್ಕೆ ಸಿಲುಕುತ್ತದೆ ಎಂದಿದ್ದಾರೆ.
ಹಾಗೆಯೇ ಮುಂದುವರಿದು: ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಬಂತಲ್ಲ? ಇದರ ವಿರುದ್ದ ಮೈಸೂರು ಚಲೋ ಪಾದಯಾತ್ರೆ ನಡೆಸಲು ತೀರ್ಮಾನಿಸಿದಾಗ ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಲಿಲ್ಲ.ಬದಲಿಗೆ ತಮಗೆ ಬೇಕಾದವರ ಗುಂಪು ಕಟ್ಟಿಕೊಂಡು ಯಾತ್ರೆ ಮಾಡಲಾಯಿತು.
ಯಾವಾಗ ಈ ಕೆಲಸವಾಯಿತೋ? ಆಗ ಹಲವು ಮಂದಿ ಹಿರಿಯ ನಾಯಕರು ಸೇರಿ ಸರ್ಕಾರದ ವಿರುದ್ದ ಪ್ರತ್ಯೇಕ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಿದ್ದರೆ ಇಂತಹ ಒಡಕಿನ ಧ್ವನಿ ಏಕೆ ಬರುತ್ತಿತ್ತು?ವಸ್ತು ಸ್ಥಿತಿ ಎಂದರೆ ರಾಜ್ಯ ಬಿಜೆಪಿಯಲ್ಲಿ ಇವತ್ತು ಹಿರಿಯರಿಗೆ ಗೌರವ ಸಿಗುತ್ತಿಲ್ಲ. ಪಕ್ಷದ ಕೆಲಸಗಳಲ್ಲಿ ಅವರನ್ನು ಇನ್ ವಾಲ್ವ್ ಮಾಡಿಕೊಳ್ಳುವ ಕೆಲಸವಾಗುತ್ತಿಲ್ಲ. ಅರ್ಥಾತ್, ಕರ್ನಾಟಕದ ಬಿಜೆಪಿ ಸ್ಪಷ್ಟವಾಗಿ ಒಂದು ಗುಂಪಿನ ಹಿಡಿತಕ್ಕೆ ಸಿಲುಕಿದೆ.ಇದು ಎಲ್ಲರಿಗೂ ಗೊತ್ತು.ಹೀಗಾಗಿ ಮೊದಲು ಇದನ್ನು ಸರಿಪಡಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷ ಹೋಳಾಗಬಹುದು ಅಂತ ವಿವರಿಸಿದ್ದಾರೆ.
ಹೀಗೆ ಸದಾನಂದಗೌಡರು ಆಡಿದ ಮಾತನ್ನು ಗಂಭೀರವಾಗಿ ಕೇಳಿಸಿಕೊಂಡ ಅಮಿತ್ ಷಾ ಮತ್ತು ನಡ್ಡಾ ಅವರು,ಹೌದು ರಾಜ್ಯ ಬಿಜೆಪಿಗೆ ಸರ್ಜರಿ ಮಾಡುವ ಅಗತ್ಯವಿದೆ ಎಂದಿದ್ದಾರಂತೆ.
ಟಾರ್ಗೆಟ್ ಆಗುತ್ತಿದ್ದಾರೆ ವಿಜಯೇಂದ್ರ (Vijayendra)
ಅಂದ ಹಾಗೆ ಸದಾನಂದಗೌಡರು ದಿಲ್ಲಿಯಲ್ಲಿ ಏನು ಹೇಳಿ ಬಂದರೋ?ಅದನ್ನೇ ಬಸವನಗೌಡ ಪಾಟೀಲ್ ಯತ್ನಾಳ್ ಅವರಂತಹ ನಾಯಕರು ಇಲ್ಲಿ ನೇರವಾಗಿ ಹೇಳುತ್ತಿದ್ದಾರೆ.ಮತ್ತು ಅವರೆಲ್ಲರ ಟಾರ್ಗೆಟ್ ಆಗಿರುವವರು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ. ಪಕ್ಷದ ಅಧ್ಯಕ್ಷರಾದ ನಂತರ ಅವರು ರೂಪಿಸಿದ ಪದಾಧಿಕಾರಿಗಳ ಪಟ್ಟಿಯಿಂದ ಹಿಡಿದು ಎಲ್ಲ ಹಂತದ ನೇಮಕಾತಿಗಳನ್ನು ವಿರೋಧಿಸುತ್ತಿರುವ ಯತ್ನಾಳ್ ಮತ್ತಿತರ ನಾಯಕರು,ಇದು ಬಿಜೆಪಿ ಪಟ್ಟಿಯಲ್ಲ. ಕೆಜೆಪಿ-2 ಅಂತ ಟೀಕಿಸುತ್ತಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾರು ತಮ್ಮ ಸುತ್ತ ಇದ್ದರೋ?ಅವರನ್ನೇ ಪಕ್ಷದ ಆಯಕಟ್ಟಿನ ಜಾಗಗಳಲ್ಲಿ ವಿಜಯೇಂದ್ರ ಕೂರಿಸಿದ್ದಾರೆ ಎಂಬುದು ಈ ಗ್ಯಾಂಗಿನ ಆರೋಪ.
ಪರಿಣಾಮ?ದಿನ ಕಳೆದಂತೆ ರಾಜ್ಯ ಬಿಜೆಪಿಯ ಅಂತ:ಕಲಹ ಹೆಚ್ಚಾಗುತ್ತಾ ಸಿದ್ಧರಾಮಯ್ಯ ಸರ್ಕಾರದ ವಿರುದ್ದ ಹೋರಾಡುವ ಶಕ್ತಿಯೇ ಕುಸಿದು ಹೋದಂತೆ ಕಾಣುತ್ತಿದೆ.
ಕೆಲವು ಬಾರಿ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಬ್ಬರದ ಮಾತುಗಳು ಕೇಳುತ್ತವಾದರೂ ಆಳದಲ್ಲಿ ಬಿಜೆಪಿಯ ಫ್ರಂಟ್ ಲೈನ್ ನಾಯಕರು ಒಂದು ಬಗೆಯ ಮುಜುಗರಕ್ಕೆ ಒಳಗಾದವರಂತೆ ಕಾಣುತ್ತಾರೆ.
ಈ ಬಗ್ಗೆ ರಾಜ್ಯ ಬಿಜೆಪಿಯ ಕೆಲ ನಾಯಕರು,ಒಂದು ವೇಳೆ ಸರ್ಕಾರದ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಡಲು ಇವರು ಹೊರಟರೆ ಇವರನ್ನೇ ಸಿದ್ದು,ಡಿಕೆಶಿ ಇಕ್ಕಳದಲ್ಲಿ ಸಿಲುಕಿಸುತ್ತಾರೆ.ಹೀಗಾಗಿ ಇವರಿಗೆ ಹೋರಾಟ ಮಾಡುತ್ತಿದ್ದೇವೆ ಎಂಬ ಮೆಸೇಜು ಹೋಗಬೇಕು.ಆದರೆ ಸಿದ್ಧು,ಡಿಕೆಶಿ ಸಿಟ್ಟಾಗಬಾರದು.
ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿಯ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವುದಿಲ್ಲ.ಈ ಹೋರಾಟಕ್ಕೆ ತಾರ್ಕಿಕ ಪ್ರಾರಂಭ ಅಂತಿದ್ದರೆ ತಾನೇ ತಾರ್ಕಿಕ ಅಂತ್ಯ ಸಿಗುವುದು?
ಹೀಗಾಗಿ ಬಿಜೆಪಿ ವರಿಷ್ಟರು ಮನಸ್ಸು ಮಾಡಿದರೆ ಮಾತ್ರ ಏನಾದರೂ ಆಗಬಹುದು.ಇಲ್ಲದಿದ್ದರೆ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎನ್ನುತ್ತಾರೆ.
ರಾಜಿಗೆ ರೆಡಿಯಾಗಿ ಅಂದ್ರು ನಡ್ಡಾ? (Vijayendra)
ಹೀಗೆ ರಾಜ್ಯ ಬಿಜೆಪಿಯ ಬಣ ರಾಜಕೀಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ನಡ್ಡಾ ಆಡಿದ ಮಾತು ವಿಜಯೇಂದ್ರ ಅವರ ತಲೆನೋವಿಗೆ ಕಾರಣವಾಗಿದೆಯಂತೆ. ಅದೆಂದರೆ ಬಸವನಗೌಡ ಪಾಟೀಲ್ ಯತ್ನಾಳ್ ಜತೆ ರಾಜಿಗೆ ಸಿದ್ಧರಾಗಿ ಎಂಬುದು. ಕೆಲ ದಿನಗಳ ಹಿಂದೆ ದಿಲ್ಲಿಗೆ ಹೋಗಿದ್ದ ವಿಜಯೇಂದ್ರ, ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಯತ್ನಾಳ್ ವಿರುದ್ಧ ದೂರು ಕೊಟ್ಟಿದ್ದರು.
ಪದೇ ಪದೇ ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಯತ್ನಾಳ್ ಅವರಿಂದ ಮುಜುಗರ ಅನುಭವಿಸಬೇಕಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವುದು ಹೇಗೆ? ಹೀಗಾಗಿ ಯತ್ನಾಳ್ ಅವರನ್ನು ಮೊದಲು ಸಸ್ಪೆಂಡ್ ಮಾಡಿ ಅಂತ ನಡ್ಡಾ ಅವರನ್ನು ಒತ್ತಾಯಿಸಿದ್ದರು.
ಆಗೆಲ್ಲ ವಿಜಯೇಂದ್ರ ಅವರನ್ನು ಸಮಾಧಾನಿಸಿದ ನಡ್ಡಾ, ಆಗಸ್ಟ್ ಅಂತ್ಯದವರೆಗೆ ನೋಡೋಣ. ಆಮೇಲೆ ಸಸ್ಪೆಂಡ್ ಮಾಡೋಣ ಅಂತ ಭರವಸೆ ನೀಡಿದ್ದರು.
ಯಾವಾಗ ಅವರು ಈ ಭರವಸೆ ನೀಡಿದರೋ? ಆಗ ಖುಷಿಯಿಂದ ರಾಜ್ಯಕ್ಕೆ ಮರಳಿದ್ದ ವಿಜಯೇಂದ್ರ ತಮ್ಮ ಬೆಂಬಲಿಗರ ಪಡೆಗೂ ಇದನ್ನೇ ಹೇಳಿದ್ದರು. ‘ಈ ಯತ್ನಾಳ್ ಅವರದು ಜಾಸ್ತಿ ಆಯ್ತು ಸಾರ್. ಒಂದು ಪ್ರೆಸ್ ಮೀಟ್ ಮಾಡಿ ಝಾಡಿಸಿ ಬಿಡುತ್ತೇವೆ’ ಅಂತ ಕೆಲ ಬೆಂಬಲಿಗರು ತಮ್ಮ ಬಳಿ ಬಂದಾಗ, ನೋ, ನೋ ಅದರಿಂದ ಉಪಯೋಗವಿಲ್ಲ. ಹೀಗಾಗಿ ಸುಮ್ಮನಿರಿ. ಆಗಸ್ಟ್ ಅಂತ್ಯದ ವೇಳೆಗೆ ಯತ್ನಾಳ್ ಸಸ್ಪೆಂಡ್ ಆಗ್ತಾರೆ ಅಂತ ವಿಜಯೇಂದ್ರ ಮತ್ತು ಯಡಿಯೂರಪ್ಪ ಹೇಳಿದ್ದರು.
Read also : Siddaramaiah | ಸಿದ್ಧು ಇಳಿಯಲ್ಲ,ಇಳಿದ್ರೆ ಸರ್ಕಾರ ಉಳಿಯಲ್ಲ
ಆದರೆ ಮೊನ್ನೆ ಇದ್ದಕ್ಕಿದ್ದಂತೆ ಫೋನು ಮಾಡಿದ ನಡ್ಡಾ ಅವರು, ಒಂದು ಸಲ ದಿಲ್ಲಿಗೆ ಬನ್ನಿ. ಯತ್ನಾಳ್ ಮತ್ತು ನಿಮ್ಮ ಮಧ್ಯೆ ರಾಜಿ ಮಾಡಿಸುತ್ತೇವೆ. ಯಾಕೆಂದರೆ ಇವತ್ತಿನ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಹೋಗುವುದು ಮುಖ್ಯ ಎಂದರಂತೆ.
ಆದರೆ ನಡ್ಡಾ ಅವರ ಮಾತನ್ನು ಕೇಳಿದ ವಿಜಯೇಂದ್ರ: ಅದ್ಹೇಗೆ ಸಾರ್ ರಾಜಿ ಮಾಡಿಕೊಳ್ಳುವುದು? ನಮ್ಮ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿ, ಪದೇ ಪದೇ ನಮ್ಮನ್ನು ಮುಜುಗರಕ್ಕೆ ಸಿಲುಕಿಸಿದವರ ಜತೆ ಹೇಗೆ ರಾಜಿ ಮಾಡಿಕೊಳ್ಳಬೇಕು? ನೋ ಸಾರ್, ಯಾವ ಕಾರಣಕ್ಕೂ ಅವರ ಜತೆ ರಾಜಿ ಬೇಡ ಎಂದಿದ್ದಾರಂತೆ.
ಬಿಜೆಪಿ (BJP)ಯಲ್ಲಿ ಅಕ್ಟೋಬರ್ ಕ್ರಾಂತಿ? (Vijayendra)
ಅಂದ ಹಾಗೆ ಪಕ್ಷದಲ್ಲಿ ಅಪನಂಬಿಕೆಯ ವಾತಾವರಣ ಹೆಚ್ಚಾಗುತ್ತಿದ್ದಂತೆಯೇ ಬಿಜೆಪಿ ಪಾಳಯದಲ್ಲಿ ಒಂದು ಗುಸುಗುಸು ಶುರುವಾಗಿದೆ. ಅದರ ಪ್ರಕಾರ,ರಾಜ್ಯ ಬಿಜೆಪಿಯ ಮೇಲೆ ತಾವು ಸಾಧಿಸಿರುವ ಹಿಡಿತವನ್ನು ಬಿಟ್ಟು ಕೊಡಲು ವಿಜಯೇಂದ್ರ ರೆಡಿ ಇಲ್ಲ.ಅದೇ ಕಾಲಕ್ಕೆ ಪಕ್ಚ ವಿಜಯೇಂದ್ರ ಹಿಡಿತದಲ್ಲಿರುವುದು ಬಹುತೇಕ ನಾಯಕರಿಗೆ ಇಷ್ಟವಿಲ್ಲ.
ಹೀಗಾಗಿ ವಿಜಯೇಂದ್ರ ವಿರುದ್ದ ತಿರುಗಿ ಬೀಳಲು ಹಲವು ನಾಯಕರು ಸಜ್ಜಾಗಿದ್ದಾರೆ.ಅಷ್ಟೇ ಅಲ್ಲ,ಅಕ್ಟೋಬರ್ ಹೊತ್ತಿಗೆ ದಂಗೆ ಏಳಲು ನಿರ್ಧರಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ,ಈ ಅಕ್ಟೋಬರ್ ಕ್ರಾಂತಿಯ ಸುಳಿವು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರಿಗಿದೆ. ನಹೀಗಾಗಿಯೇ ಮೊನ್ನೆ-ಮೊನ್ನೆಯಷ್ಟೇ ತಮ್ಮನ್ನು ಭೇಟಿಯಾದ ವಿಜಯೇಂದ್ರ ಅವರಿಗೆ ಈ ನಾಯಕರು ಅದನ್ನು ಸೂಚ್ಯವಾಗಿ ಹೇಳಿದ್ದಾರೆ.
ಪಕ್ಷದ ನಾಯಕರಿಗೆ ಯಾವ್ಯಾವ ಕಾರಣಗಳಿಗಾಗಿ ನಿಮ್ಮ ಮೇಲೆ ಸಿಟ್ಟಿದೆ?ಮತ್ತದನ್ನು ನೀವು ಹೇಗೆ ಪರಿಹರಿಸಿಕೊಳ್ಳಬಹುದು?ಅಂತ ವಿವರಿಸಿದ್ದಾರೆ. ಒಂದು ವೇಳೆ ಅವರಾಡಿದ ಮಾತುಗಳನ್ನು ವಿಜಯೇಂದ್ರ ಪಾಸಿಟಿವ್ ಆಗಿ ತೆಗೆದುಕೊಂಡರೆ ಓಕೆ.ಇಲ್ಲದೆ ಹೋದರೆ ಅಕ್ಟೋಬರ್ ಹೊತ್ತಿಗೆ ಮೇಲೇಳಲಿರುವ ಸ್ವಪಕ್ಷೀಯರ ಕ್ರಾಂತಿಯನ್ನು ಎದುರಿಸಲು ಅವರು ಸಜ್ಜಾಗಬೇಕು.
ರಿಯಲ್ ಫೈಟರ್ (Kumaraswamy) ಕುಮಾರಸ್ವಾಮಿ (Vijayendra)
ಕುತೂಹಲದ ಸಂಗತಿ ಎಂದರೆ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳು ಜೆಡಿಎಸ್ ನಾಯಕ,ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಶಕ್ತಿಯನ್ನು ಹೆಚ್ಚಿಸುತ್ತಿವೆ. ವಸ್ತುಸ್ಥಿತಿ ಎಂದರೆ ಮೂಡಾ ಎಪಿಸೋಡಿನ ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಹೋಗುತ್ತಿರುವ ರಿಪೋರ್ಟು ಕುಮಾರಸ್ವಾಮಿ ಅವರ ಪರವಾಗಿವೆ.
ಮೂಡಾ ಎಪಿಸೋಡಿನ ನಂತರ ಕುಮಾರಸ್ವಾಮಿ ಹೋರಾಡುತ್ತಿರುವ ರೀತಿಗೂ,ನಮ್ಮ ಫ್ರಂಟ್ ಲೈನ್ ನಾಯಕರು ಹೋರಾಡುತ್ತಿರುವ ರೀತಿಗೂ ವ್ಯತ್ಯಾಸವಿದೆ.ಇನ್ ಫ್ಯಾಕ್ಟ್ ತಮ್ಮ ವಿರುದ್ಧ ಬಿಜೆಪಿಯ ರಾಜ್ಯ ನಾಯಕರು ಹೋರಾಡುತ್ತಿರುವ ರೀತಿಯಿಂದ ಸಿಎಂ ಸಿದ್ದು ಆಗಲಿ,ಡಿಸಿಎಂ ಡಿಕೆಶಿ ಆಗಲಿ ತಲೆ ಕೆಡಿಸಿಕೊಂಡಿಲ್ಲ.
ಬದಲಿಗೆ ಕುಮಾರಸ್ವಾಮಿ ನಡೆಸುತ್ತಿರುವ ಹೋರಾಟದಿಂದ ಕನಲಿದ್ದಾರೆ.ಪರಿಣಾಮ?ಕುಮಾರಸ್ವಾಮಿ ಅವರನ್ನು ಹಣಿಯಲು ಮುಂದಾಗಿರುವ ಸಿದ್ದು,ಡಿಕೆಶಿ ಪಡೆ, ಜಂತಕಲ್ ಮೈನಿಂಗ್ ಎಪಿಸೋಡಿನಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವಂತೆ ರಾಜ್ಯಪಾಲರಿಗೆ ಸಲಹೆ ನೀಡಿದೆ.
ಇದೇ ರೀತಿ ಕುಮಾರಸ್ವಾಮಿ ಅವರನ್ನು ಯಾವ್ಯಾವ ಇಕ್ಕಳದಲ್ಲಿ ಸಿಲುಕಿಸಲು ಸಾಧ್ಯವೋ?ಅದನ್ನೆಲ್ಲ ಮಾಡತೊಡಗಿದೆ. ಹೀಗೆ ಕುಮಾರಸ್ವಾಮಿ ಅವರನ್ನು ಹಣಿಯಲು ನಿಂತಿರುವ ಸಿದ್ದು ಪಡೆ,ಬಿಜೆಪಿಯ ಫ್ರಂಟ್ ಲೈನ್ ನಾಯಕರ ಮೇಲೆ ಮುಗಿಬೀಳುತ್ತಿಲ್ಲ. ಮೊನ್ನೆ ಮುರುಗೇಶ್ ನಿರಾಣಿ, ಜನಾರ್ಧನವರೆಡ್ಡಿ ಮತ್ತು ಶಶಿಕಲಾ ಜೊಲ್ಲೆ ಅವರ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ ಅಂತ ರಾಜ್ಯಪಾಲರಿಗೆ ಸಲಹೆ ನೀಡಿದೆಯಾದರೂ ಇವರೆಲ್ಲ ಸಿದ್ದು ಪಡೆಗೆ ಸವಾಲೇ ಅಲ್ಲ. ಹೀಗೆ ರಾಜ್ಯ ಬಿಜೆಪಿಯ ಫ್ರಂಟ್ ಲೈನ್ ನಾಯಕರನ್ನು ಬಿಟ್ಟು ಕುಮಾರಸ್ವಾಮಿ ವಿರುದ್ದ ಸಿದ್ದು ಪಡೆ ನಿರ್ಣಾಯಕ ಧಾಳಿ ಮಾಡುತ್ತಿದೆ ಎಂದರೆ,ಅದು ತನ್ನ ಎದುರಾಳಿಯ ಪಟ್ಟ ನೀಡಿರುವುದು ಕುಮಾರಸ್ವಾಮಿ ಅವರಿಗೇ ಹೊರತು ನಮ್ಮ ಪ್ರಂಟ್ ಲೈನ್ ಲೀಡರುಗಳಿಗಲ್ಲ.
ಆದ್ದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ನಡೆಯುತ್ತಿರುವ ಮಿತ್ರಕೂಟದಲ್ಲಿ ಕುಮಾರಸ್ವಾಮಿ ಅವರೇ ಎಫೆಕ್ಟೀವ್ ಅಂತ ಅಮಿತ್ ಷಾ ಅವರಿಗೆ ಮೆಸೇಜುಗಳು ತಲುಪುತ್ತಿವೆ.ಅರ್ಥಾತ್,ಮಿತ್ರಕೂಟದ ಪವರ್ ಫುಲ್ ನಾಯಕರಾಗಿ ಕುಮಾರಸ್ವಾಮಿ ಎಮರ್ಜ್ ಆಗಿದ್ದಾರೆ.
ಲಾಸ್ಟ್ ಸಿಪ್ (Vijayendra)
ಅಂದ ಹಾಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂಬ ತೀರ್ಮಾನಕ್ಕೆ ಬಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ (Kumaraswamy) ಇದಕ್ಕಾಗಿ ಪಕ್ಷವನ್ನು ಅಣಿಗೊಳಿಸಲು ಸಜ್ಜಾಗುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಆಗಸ್ಟ್ 25 ರ ಭಾನುವಾರ ಪಕ್ಷದ ಕಛೇರಿ ಜೆ.ಪಿ.ಭವನದಲ್ಲಿ ಕೋರ್ ಕಮಿಟಿ ಸಭೆ ನಡೆದಿದ್ದು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಈಗಿನಿಂದಲೇ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ಕೊಡಬೇಕು.
ಮಿನಿಮಮ್ ನೂರು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಬೇಕು.ಉಳಿದಂತೆ ಬೇರೆ ಕಡೆ ಬಿಜೆಪಿಯ ಗೆಲುವಿಗೆ ಶಕ್ತಿ ತುಂಬಲು ನಮಗೆ ಸಾಧ್ಯವಾಗಬೇಕು ಎಂಬುದು ಕುಮಾರಸ್ವಾಮಿ ಟಾರ್ಗೆಟ್.
ಜೆಡಿಎಸ್ ಮೂಲಗಳ ಪ್ರಕಾರ,ಈಗಲ್ಲ ಇನ್ನೊಂದು ವರ್ಷಕ್ಕಾದರೂ ಕರ್ನಾಟಕ ವಿಧಾನಸಭೆಗೆ ಉಪಚುನಾವಣೆ ನಡೆಯುವುದು ಖಚಿತ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.
ಆರ್.ಟಿ.ವಿಠ್ಠಲಮೂರ್ತಿ