ದಾವಣಗೆರೆ (Davanagere): ರಂಗ ಅನಿಕೇತನ ದಾವಣಗೆರೆ ವತಿಯಿಂದ ರಂಗಕಲರವ-25 ಮತ್ತು ವಿಶ್ವರಂಗಭೂಮಿ ದಿನಾಚರಣೆಯನ್ನು ನಗರದ ಎಂ.ಸಿ.ಸಿ. `ಬಿ’ ಬ್ಲಾಕ್‍ನಲ್ಲಿರುವ ಪ್ರೇಮಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣಕುಮಾರ್ ಮಾತನಾಡಿ, ನಮ್ಮ ಸಮಾಜದಲ್ಲಿ ರಂಗಭೂಮಿಗಳ ಮಹತ್ವವನ್ನು ನೆನಪಿಸುವುದಕ್ಕಾಗಿ ಪ್ರತಿವರ್ಷ ವಿಶ್ವರಂಗಭೂಮಿ ದಿನವನ್ನು ಆಚರಿಸಲಾಗುತ್ತಿದೆ. ಪ್ರಾಚೀನ ಕಾಲದಿಂದಲೂ ರಂಗಭೂಮಿಗಳು ಸಹಾನುಭೂತಿ, ಸಮುದಾಯ ಮತ್ತು ಸಾಂಸ್ಕøತಿಕ ತಿಳುವಳಿಕೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತವೆ. ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆಗೆ ಪ್ರಬಲ ಸಾಧನವಾಗಿಯೂ ರಂಗಭೂಮಿ ಕಾರ್ಯನಿರ್ವಹಿಸುತ್ತಿದೆ.
ಇಂದು ವಿಶ್ವರಂಗಭೂಮಿ ದಿನವನ್ನು ರಂಗಭೂಮಿ ಮತ್ತು ಶಾಂತಿಯ ಸಂಸ್ಕøತಿಯ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ರಂಗ ಅನಿಕೇತನ ಅರ್ಥಪೂರ್ಣವಾಗಿ ಮಕ್ಕಳಲ್ಲಿ ರಂಗಭೂಮಿಯ ಕಲೆಯನ್ನು ಉಳಿಸುವ ಉದ್ದೇಶದಿಂದ ನಾಟಕವನ್ನು ಸಿದ್ಧ ಮಾಡಿ ಪ್ರದರ್ಶಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ತಿಳಿಸಿದರು.
ಇಂದು ರಂಗಭೂಮಿ ಸೇರಿದಂತೆ ಎಲ್ಲ ಜನಪದ ಕಲೆಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದು, ಮುಂದಿನ ಜನತೆಗಾಗಿ ರಂಗಭೂಮಿ ಸೇರಿದಂತೆ ಎಲ್ಲ ಜನಪದ ಕಾರ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಶ್ರಮ ಬೇಕಾಗಿದೆ ಎಂದು ತಿಳಿಸಿದರು.
ಧಾರವಾಡದ ನೀನಾಸಂ ರಂಗಕಲಾವಿದೆ ಶಶಿಕಲಾ ಎನ್. ಮಾತನಾಡಿ, ಚಿಂದಿ ಆಯುವ ಮಕ್ಕಳು, ಬಾಲಮಂದಿರದ ಮಕ್ಕಳು ಮತ್ತು ಇತರೆ ನಿರ್ಲಕ್ಷಿತ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಅವರ ಮೂಲಕ ನಾಟಕಗಳನ್ನು ಸಿದ್ಧಗೊಳಿಸಿ ಪ್ರದರ್ಶನ ಮಾಡಲಾಗುತ್ತಿದೆ. ಮಕ್ಕಳಲ್ಲಿ ಸಂಸ್ಕøತಿ ಮತ್ತು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಹಿರಿಯ ವಕೀಲರಾದ ಅನೀಸ್ ಪಾಷಾ ಮಾತನಾಡಿ, ಭಾರತೀಯ ರಂಗಭೂಮಿ ಸಂಗೀತ, ನೃತ್ಯ ಮತ್ತು ನಟನೆಯ ಮೂಲಕ ನಿರೂಪಣಾ ಕಲಾ ಪ್ರಕಾರವಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಆಧುನಿಕ ಭಾರತದಲ್ಲಿ ರಂಗಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ರಂಗ ಅನಿಕೇತನ ದಾವಣಗೆರೆಯ ಅಧ್ಯಕ್ಷರಾದ ಸುಧಾ ಹೆಚ್.ಎನ್. ಮಾತನಾಡಿ, ದಾವಣಗೆರೆಯಲ್ಲಿ ರಂಗ ಅನಿಕೇತನ ನಿರಂತರವಾಗಿ ರಂಗಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಿದ್ದು, ಪ್ರಮುಖವಾಗಿ ಹೆಸರಾಂತ ಕಲಾವಿದರನ್ನು ಆಹ್ವಾನಿಸಿ ಮಕ್ಕಳಲ್ಲಿ ರಂಗಭೂಮಿ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರದರ್ಶನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ವಕೀಲರಾದ ಹೆಚ್.ಎಸ್.ಯೋಗೀಶ್, ವೆಂಕಟೇಶ್ ಮತ್ತು ಉಷಾ ಕೈಲಾಸದ್, ದಾವಣಗೆರೆ ದಿನೇಶ್, ನಿಸರ್ಗ, ಭಾರತಿ, ರೇಣುಕಾ, ಸಿದ್ಧರಾಜು, ಶಂಭುಲಿಂಗಪ್ಪ ಉಪಸ್ಥಿತರಿದ್ದರು.
ನಿರೂಪಣೆ ಅನಿತಾ ವಿ.ಟಿ. ನೆರವೇರಿಸಿದರು. ಉಷಾ ಕೈಲಾಸದ್ ಸ್ವಾಗತಿಸಿದರು.
ರಂಗಭೂಮಿ ದಿನಾಚರಣೆ ಅಂಗವಾಗಿ ಸರ್ವಾಂತರ್ಯಾಮಿ ಗಣಿತ ಎಂಬ ನಾಟಕ, ರಂಗಗೀತೆಗಳ ರೂಪಕ ಹಾಗೂ 2025ರ ರಂಗಸಂದೇಶವನ್ನು ವಿಭಿನ್ನವಾಗಿ ರೂಪಕದ ರೀತಿಯಲ್ಲಿ ಶಿಬಿರದ ಮಕ್ಕಳು ಪ್ರಸ್ತುತಪಡಿಸಿದರು.