Kannada News | Sanduru Stories | Dinamaana.com | 16-06-2024
ಲಾರಿ ಡೈವರಿಗೆ ದಿನಕ್ಕೆ ಐದು ಸಾವಿರ ದುಡಿಮೆ .. (Sanduru Stories)
ಒಂದು ಕಾಲದಲ್ಲಿ ರೊಕ್ಕ ಅನ್ನಾವು ನೀರ್ ನೀರು ಹರಿದಂಗ ಹರಿದ್ವು ಸಾರ್, ದಿನಕ್ಕೆ ಏನಿಲ್ಲಾಂದ್ರು ಒಬ್ಬ ಸಾಮಾನ್ಯ ಟಿಪ್ಪರ್ ಲಾರಿ ಡ್ರೈವರ್ ಐದಾರು ಸಾವಿರ ರೂಪಾಯಿ ದುಡಿಯುತ್ತಿದ್ದ. ಹದಿನೈದು ಇಪ್ಪತ್ತು ಟನ್ ಕೆಪ್ಯಾಸಿಟಿಯ ಟಿಪ್ಪರಿಗೆ ಮೂವತ್ತು ಮೂವತ್ತೈದು ಟನ್ನು ಅದಿರನ್ನು ಬೆಟ್ಟಗಳ ತುದಿಯಿಂದ ತಂದು ಸ್ಟಾಕ್ ಯಾರ್ಡುಗಳಿಗೆ ಸುರಿದರೆ ಸಾಕಿತ್ತು.
ಹೀಗೆ ಹೇಳುತ್ತ ನನ್ನೆದುರಿಗೆ ನಿಂತಿದ್ದ ಆತನ ಹೆಸರು ಹುಲುಗಪ್ಪ. ಊರು ಅಂಕಮ್ಮನಾಳು. ಆ ಊರಿನ ಜನರು ಬದುಕಲು ತುಂಬ ಫಲವತ್ತಾದ ಕೆಂಪು ಕಲ್ಲು ಮಣ್ಣಿನ ಹೊಲಗಳಿದ್ದವು. ಸುತ್ತಲೂ ಹಸಿರಿತ್ತು.ತಮ್ಮ ಊರಿನ ರಕ್ಷಣೆಗೆಂದೇ ಇರುವವೇನೋ ಎಂಬಂತೆ ನಿರುಮ್ಮಳವಾಗಿ ಕುಂತ ಬೆಟ್ಟಗಳು ಇದ್ದವು.
ಗಣಿಗಾರಿಕೆ ಬಂದ್ ಆತು ನೋಡ್ರಿ (Sanduru Stories)
ಒಂದು ಕಾಲದ ಟಿಪ್ಪರಿನ ಸಹಾಯಕನಾಗಿ ಸದಾ ಮಣ್ಣು,ಕಲ್ಲುಗಳ ಜೊತೆ ಒಡನಾಡಿದ್ದ ಆತನ ಬಟ್ಟೆಗಳು ಎಂದೂ ಇಷ್ಟು ಹೊಳಪಿನಿಂದ ಕೂಡಿರಿರುತ್ತಿರಲಿಲ್ಲವಂತೆ. ಇದೇ ಈಗ ಗಣಿಗಾರಿಕೆ ಬಂದ್ ಆತು ನೋಡ್ರಿ,ಸ್ವಲ್ಪ ಬೆಳ್ ಬೆಳ್ಳನೆಯ ಬಟ್ಟೆ ಹಾಕ್ಕಂಡು ಅಡ್ಡಾಡುತೀವಿ ಎಂದ. ಊರಲ್ಲಿ ಸಾಕಷ್ಟು ಮನೆಗಳಿದ್ದವು.ಜನರೂ ಇದ್ದರು. ಒಂದು ರೀತಿಯ ಮ್ಲಾನತೆ ಆವರಿಸಿತ್ತು.ಯಾರು ಯಾರನ್ನೂ ಕುಶಲ ವಿಚಾರಿಸುವ ದರ್ದು ಕಾಣಿಸಲಿಲ್ಲ.ಸ್ವಲ್ಪ ಹೊತ್ತು ನಾನೂ ಸುಮ್ಮನಾದೆ.
ಗಾಂಧಿನೋಟುಗಳಾಗಿ ಹೋದುವಲ್ಲ? (Sanduru Stories)
ಅವನಿಗೆ ಏನನ್ನಿಸಿತೋ, ತನ್ನ ಊರಿನ ಸಮರ್ಥನೆಗೆ ಎನ್ನುವಂತೆ,’ಗಣಿಗಾರಿಕೆ ನಿಂತೋಯ್ತಲ್ಲ ಸಾರ್ …ಅದಕ್ಕೆ ಊರು ಇಷ್ಟು ಸೈಲೆಂಟು’ ಎಂದನಾತ. ಮತ್ತೆ ಕೊಲ್ಲುವ ಮೌನ ಆವರಿಸಿತು.ಅದನ್ನು ಹೊಡೆದೋಡಿಸಲೋ ಎಂಬಂತೆ ಸುಮ್ಮನೆ ನಕ್ಕ.’ಹಾಡು ,ಹಸೆ, ಕುಣಿತ, ಜಾತ್ರೆ ಪರಿಷೆ ಮದುವೆ ಮುಂಜಿ…ದೈವ ಇವುಗಳಾವುವೂ ಇಲ್ಲವೆ?’ ಕೇಳಿದೆ. ‘ಅವೆಲ್ಲ ಗಾಂಧಿನೋಟುಗಳಾಗಿ ಹೋದುವಲ್ಲ?’ನಿಮಗಿನ್ನೂ ತಿಳಿದಿಲ್ಲವೆ ಎಂಬಂತೆ ಆತನ ಕಣ್ಣುಗಳು ನನ್ನನ್ನೇ ಪ್ರಶ್ನಿಸುವಂತೆ ನೋಡಿದವು.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-14 ಹುಟ್ಟಿ ಬೆಳೆದ ಮನೆಯ ಬುನಾದಿ ಮಣ್ಣು
‘ಟಿಪ್ಪರ ತಗಣಾಕ ಸಾಲ (Sanduru Stories)
‘ಟಿಪ್ಪರ ತಗಣಾಕ ಸಾಲ ಮಾಡಿದೆ: ಹೊಲ ಹೋತು. ಬಡ್ಡಿ ಚಕ್ರಬಡ್ಡಿಗೆ ಮನಿಹೋತು….ಈಗೇನಿದ್ರೂ ಆರಾಮ್ ನೋಡ್ರೀ’ಎಂದು ಎರಡೂ ಕೈ ಎತ್ತಿ ತೋರಿಸಿದ.
ಒಂದ್ ಕಿಡ್ನಿ ಇದ್ರೆ ಸಾಕಂತಲ್ರೀ? (Sanduru Stories)
ಇಡೀ ಆಕಾಶ ಭೂಮಿ ನಂದು ಎನ್ನುವ ಹಾಗೆ. ‘ಮತ್ತೆ.. ಹೊಟ್ಟೆಗೆ ಬಟ್ಟೆಗೆ….?’ಎಂದೇನೋ ಕೇಳಲು ಹೊರಟೆ, ಇಂಗಿತ ಅರಿತವನಂತೆ ಮಧ್ಯದಲ್ಲಿಯೆ ತಡೆದ. ‘………ಒಂದ್ ಕಿಡ್ನಿ ಇದ್ರೆ ಸಾಕಂತಲ್ರೀ? ಅದಕ್ಕೆ ರೊಕ್ಕ ಕೊಡ್ತಾರಲ್ಲ!” ನಿರುದ್ವಿಗ್ನನಾಗಿ ಒಂದೇ ಸಮನೆ ಹೇಳುತ್ತಿದ್ದವನನ್ನು ಸುಮ್ಮನೆ ನೋಡಿದೆ.
ಆತ ವಿಜ್ಞಾನದ ಪ್ರಯೋಗ ವಸ್ತುವಿನ ಹಾಗೆ ತೋರಿದ!.
ಬಿ.ಶ್ರೀನಿವಾಸ