ಕೆಲವು ಸಂಬಂಧಗಳೇ ಹಾಗೆ…. ನೆನೆದರೆ ಸಾಕು ಹೊಸ ಕನಸುಗಳು ಮರುಕಳಿಸುವಂತೆ ಮಾಡುವುದು, ಸದಾ ಸಂತೃಪ್ತಿಯ ಭಾವ ಮೂಡುವಂತೆ ಪ್ರತಿ ಕ್ಷಣವೂ ಜೊತೆ ಜೊತೆಯಾಗಿ ಸಾಗಬೇಕು ಎಂದೆನಿಸುತ್ತದೆ. ಆದರೆ ಪರಿಸ್ಥಿತಿಯೋ, ಮನಸ್ಥಿತಿಯೋ ಆ ಸಂಬಂಧ ಒಂಟಿತನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಗೆ ತಲುಪಿದಾಗ ಅದೇ ಒಂಟಿತನ ಶಕ್ತಿಯಾಗಿ ಮಾರ್ಪಡುತ್ತದೆ.
ಬದುಕುವುದಕ್ಕೆ ವೇಷ ಹಾಕುವುದು ತಪ್ಪಲ್ಲ, ಆದರೆ ಬೇರೊಬ್ಬರ ಮನಸನ್ನೋ. ಜೀವನವನ್ನೋ ಹಾಳು ಮಾಡಲು ವೇಷ ಅಥವಾ ಮುಖವಾಡ ಹಾಕಿ ಅಮಾಯಕರ ಹಾಗೆ ಬದುಕುವುದು ನಂಬಿದ ಜೀವಕ್ಕೆ ಮಾಡುವ ಮೋಸದ ಪರಮಾವಧಿ.
ಹುಚ್ಚುತನದ ಹೆಚ್ಚು ಕಮ್ಮಿ ಭಾವಗಳಿಗೆ ಬದುಕು ಬಣ್ಣವಾಗಿದೆ. ಮರುಳಾದೆ ನಾ ನಿನ್ನೊಡಲ ಉಸಿರಿಗೆ, ಬೆವರ ಹನಿಗೆ, ಏರಿಳಿತದ ಧ್ವನಿಗೆ.
ಬೆತ್ತಲಾಗಿದ್ದು ಬರೀ ದೇಹವಲ್ಲ, ಮನಸು ಕೂಡ. ನಂಬಿಕೆಯ ಶಾಯರಿ ನೀರವ ಕಗ್ಗತ್ತಲಿಗೆ ಸಹಿ ಹಾಕಿದಂತಿದೆ. ನನ್ನೆದುರು ತೆರೆದಿಟ್ಟದ್ದು ಅವನನ್ನು ಮಾತ್ರವಲ್ಲ, ಅವನೊಳಗಿನ ನನ್ನನ್ನೂ ಕೂಡ.
ಹಣತೆ ಹಚ್ಚಿ ಬೆಳಕ ನೀಡುವೆನೆಂದು ಬಂದವನು ಬದುಕನ್ನೇ ಕತ್ತಲೆಯಾಗಿಸಿ, ಬೆಳಕ ಚೆಲ್ಲುವ ಮೊದಲೇ ಕಾರಿರುಳಿಗೆ ಮೃದು ನೋವಿನ ದರ್ಶನ ಮಾಡಿಸಿದ ಪರಿಯೇ ಸೋಜಿಗ.
ಭಾವನೆಗಳನ್ನು ಕಾಳಜಿ ಮಾಡುವವರಿಗಾಗಿ ಈ ಬದುಕು, ಮನಸು ಮೀಸಲಿಡಬೇಕೆಂಬ ಹಪಾಹಪಿಯಲ್ಲಿ ಅವಶ್ಯಕತೆಗಳ ಈಡೇರಿಕೆಯ ಅನಿವಾರ್ಯತೆಯಲ್ಲಿ ತೋರುವ ಕಹಿ ಸತ್ಯಗಳಿಗೆ ನಂಬಿದ ಜೀವವನ್ನೇ ಬಲಿಕೊಡುವ ಮುಖವಾಡ.
ನಾವು ಆಯ್ಕೆ ಮಾಡಿಕೊಂಡ ಸಂಬಂಧಗಳು ಅಥವಾ ಸಂಗಾತಿ ಹೀಗೆಯೇ ಇರಬೇಕೆಂದು ಬಯಸುತ್ತೇವೆ. ನಮ್ಮ ನಿರೀಕ್ಷೆಗೆ ವಿರುದ್ಧವಾದ ಭಾವನೆಗಳಿಗೆ ಮನಸುಗಳು ತೆರೆದುಕೊಂಡಾಗ ಉತ್ತುಂಗದಲ್ಲಿದ್ದ ಉಲ್ಲಾಸ, ಉತ್ಸಾಹ, ಸಂಭ್ರಮ ಎಲ್ಲವು ಎಲೆಯ ಮೇಲೆ ಬಿದ್ದ ಇಬ್ಬನಿಯ ಹನಿಯಂತೆ ಕರಗಿ ನೀರಾಗುತ್ತವೆ.
ಭಾವ ವಲಯದಲ್ಲಿರುವ ಎಲ್ಲ ಜೀವಿಗಳಿಗೂ ಪ್ರೀತಿ ಹಂಚುವ ಪರಿಯನ್ನು ನೋಡಿಯೇ ಇರಬೇಕು ಈ ಮನಸು ಸೋತಿದ್ದು.ಅವನ ಎದೆಗೊರಗಿ, ಬಿಕ್ಕುವ ಹನಿಗಳಿಗೆ, ಸಾಂತ್ವನದ ಸ್ಪರ್ಶ ಜೀವನ ಪೂರ್ತಿ ಸಾಥ್ ನೀಡುತ್ತವೇನೋ ಎನ್ನುವ ನಂಬಿಕೆ.
ಇಂತಹವರು ನಮ್ಮ ಜೀವನದ ಭಾಗವಾಗುವ ರೀತಿಯೇ ಅಪೂರ್ವ. ಭಾವನೆಗೆ ನಿಲುಕದ, ಸದಾ ಹರಿಯುವ ಅಂತರ್ಜಲದಂತೆ ಪ್ರೀತಿಯುಕ್ಕಿಸಿ.
ಕೊನೆಗೆ ಹಠಾತ್ತನೆ ಜೀವವಿಂಡುವ ಮನೋವಿಕೃತಕ್ಕೆ ತಳ್ಳುವವರ ಆಂತರ್ಯದ ಮರ್ಮವೇ ಅರಿಯದಾಗುತ್ತದೆ.
ನಿನ್ನೊಳಗಿನ ವಿಶಿಷ್ಟ ಅಕ್ಕರೆ, ಕಾಳಜಿ, ನಗು ಮತ್ತೊಂದು ಬಾರಿ ಸಿಗುವವರೆಗೂ ಮತ್ತೆ ಮತ್ತೆ ಆವರಿಸಿಕೊಳ್ಳಲು ಈ ಮನಸು ಬಯಸಿ ಸಂಭ್ರಮಿಸುವ ಘಳಿಗೆಗೆ ಪ್ರಪಂಚವೇ ಶೂನ್ಯ ಎಂಬ ಭಾವಯಾನ.
ಕಳೆದುಹೋದ ಮನುಷ್ಯ ಸಂಬಂಧದ ಅಸ್ಥಿತ್ವವೇ ಸುಳ್ಳಾದ ಮೇಲೆ ಇಲ್ಲಿ ನಾನು, ನನ್ನದೆಂದು ಬೀಗುವುದು ಕೇವಲ ಭ್ರಮೆಯಷ್ಟೇ. ಮರಳು ಮಾಡಿ ಸಂಬಂಧಗಳನ್ನು ಓಲೈಸುವ ವ್ಯಕ್ತಿತ್ವಗಳನ್ನು ಸೂಕ್ಷ್ಮತನದ ಒಳಗಣ್ಣಿನಿಂದ ತೆರೆದು ನೋಡಿ ನಂಬುವ ಮನಸು ನಮ್ಮಲ್ಲಿರಬೇಕು.
ಇಲ್ಲದಿದ್ದರೆ ವಂಚಕ ಪ್ರವೃತ್ತಿಗೆ ನಮ್ಮ ಅರಿವನ್ನು, ಸ್ವಾಭಿಮಾನವನ್ನು ಪಣಕ್ಕಿಟ್ಟು ಬದುಕು ಅಥವಾ ಮನಸ್ಸನ್ನು ಉಳಿಸಿಕೊಳ್ಳಬೇಕಾದ ಹೋರಾಟದ ಹಾದಿಯು ಕಗ್ಗಂಟಾಗಿ ಉಳಿಯುತ್ತದೆ.
ಸಂಬಂಧಗಳ ಸಾತ್ವಿಕತೆಗೆ ಲಾಭ -ನಷ್ಟಗಳ ಲೆಕ್ಕಾಚಾರದ ನಿರೀಕ್ಷೆಯನಿಟ್ಟುಕೊಂಡು ಜೊತೆ ಸಾಗಿದರೆ ಹಿತವೆನಿಸದು. ಇಂತಹ ಹಾನಿಕಾರಕ ಸಂಬಂಧಗಳಿಂದ ಪ್ರಸ್ತುತ ಜಗತ್ತು ನಲುಗುತ್ತಿದೆ. ಬದುಕಿನಲ್ಲಿ ಪ್ರೀತಿಯನ್ನು ಉತ್ಸವದಂತೆ ನೋಡಬೇಕಾದರೆ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆಯಿಂದ ಒಂದಾಗಿ ಬಾಳಿದರೆ ಮಾತ್ರ ನಂಬಿದ ಸಂಬಂಧಗಳಿಗೆ ಸಾರ್ಥಕ.
– ಗೀತಾ ಭರಮಸಾಗರ, ಸಾಹಿತಿ, ಶಿಕ್ಷಕರು.