ದಾವಣಗೆರೆ: ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಬೇಕೆಂದು ಜಿಲ್ಲಾ ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಎಎಪಿ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಬಗ್ಗೆ ಕೇಳಿ ಬರುತ್ತಿದ್ದು, ಒಂದೇ ಪರೀಕ್ಷೆ ಕೇಂದ್ರದಲ್ಲಿ 6 ಜನ ವಿದ್ಯಾರ್ಥಿಗಳು 720/720 ಅಂಕಗಳನ್ನು ಪಡೆದಿದ್ದಾರೆ. ತುಂಬಾ ಕಠಿಣ ಪರೀಕ್ಷೆಯಲ್ಲಿ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಡೆದಿರುವ ಅಕ್ರಮದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕನಸು ಕಮರಿ ಹೋಗಿದೆ. ನೊಂದು ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ಕೆಳವಾಗಬೇಕಿದೆ. ಪ್ರತಿ ಬಾರಿ 3-4 ವಿದ್ಯಾರ್ಥಿಗಳು ಟಾಪರ್ ಬರುತ್ತಿದ್ದರು.
ಆದರೆ ಈ ಬಾರಿ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಾಪರ್ಗಳಾಗಿದ್ದಾರೆ. ಮಾಹಿತಿ ಪ್ರಕಾರ ಪರೀಕ್ಷೆಯನ್ನು ವೃತ್ತಿ ನಿರತ ಡಾಕ್ಟರ್ಗಳೇ ಬರೆದಿರುವ ಬಗ್ಗೆ ವರದಿಗಳು ಬಂದಿವೆ. ಪರೀಕ್ಷೆಗೂ ಮುನ್ನ ಪೇಪರ್ ಲೀಕ್ಔಟ್ ಆಗಿದೆ ಎಂದು ಹಲವು ವಿದ್ಯಾರ್ಥಿಗಳು ಆರೋಪಿಸಿದ್ದು, ಬೇರೆ ರಾಜ್ಯಗಳಲ್ಲಿ ಅರ್ಧ ಗಂಟೆ ತಡವಾಗಿ ಪೇಪರ್ ಬಂದಿದೆ. 60-70 ಗ್ರೇಸ್ ಅಂಕಗಳನ್ನು ನೀಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಸರ್ಕಾರ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಹಾಗೂ ರಾಜ್ಯಗಳಿಗೆ ಅನುಕೂಲ ಆಗುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಪದಾಧಿಕಾರಿಗಳಾದ ಆದಿಲ್ ಖಾನ್, ರವೀಂದ್ರ, ವಿಕಾಸ್, ಸುರೇಶ್ ಶಿಡ್ಲಪ್ಪ ಇದ್ದರು.