Kannada News | Dinamaana.com |28 -08-2024
ಸ್ವತಂತ್ರ ಭಾರತದಲ್ಲಿ ಸಂವಿಧಾನ ಅನುಷ್ಠಾನಗೊಂಡ ನಂತರ,ಉದ್ಯೋಗದಲ್ಲಿ,ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಾಗದಂತಹ ಸ್ಥಿತಿಯಿತ್ತು. ಕ್ರಮೇಣ 1951 ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಅನುಚ್ಛೇದ 15 (4) ಮತ್ತು 29 (2) ವಿಧಿಗಳನ್ನು ಸೇರ್ಪಡೆ ಮಾಡಲಾಯಿತು. ಈ ಎರಡೂ ತಿದ್ದುಪಡಿಗಳನ್ನು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರನ್ನು “ಹಿಂದುಳಿದ ವರ್ಗ”ಎಂದು ಕರೆಯಲಾಯಿತು.
ಎಪ್ಪತ್ತರ ದಶಕದಲ್ಲಿ ಭಾರತದ ಬಿಹಾರ ಮತ್ತು ಕರ್ನಾಟಕ ರಾಜ್ಯಗಳು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವು ಎಂದು ಹೇಳಬಹುದು. ಬಿಹಾರದಲ್ಲಿ ಸಮಾಜವಾದಿ ಕರ್ಪೂರಿ ಠಾಕೂರ್, ಕೊಲ್ಕತ್ತಾದಲ್ಲಿ ಜ್ಯೋತಿ ಬಸು,ಮತ್ತು ಕರ್ನಾಟಕದ ಅರಸು ಈ ತ್ರಿವಳಿಗಳ ಸಾಮಾಜಿಕ ಕಳಕಳಿ ಬಹುಶ್ಲಾಘನೀಯವಾದುದಾಗಿತ್ತು .
1972 ರ ಆಗಸ್ಟ್ 8 ರಂದು, ಹಿಂದುಳಿದ ವರ್ಗಗಳಿಗೆ ಶಿಕ್ಷಣದಲ್ಲಿ ಮತ್ತು ಸರ್ಕಾರದ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಮೊದಲನೇ ಹಿಂದುಳಿದ ವರ್ಗಗಳ ಆಯೋಗವನ್ನು ಸಾಮಾಜಿಕ ನ್ಯಾಯ ತತ್ವಕ್ಕೆ ಬದ್ಧರಾದ ದೇವರಾಜ ಅರಸು ರಚಿಸಿದರು. ಅದರ ಮೊತ್ತ ಮೊದಲ ಅಧ್ಯಕ್ಷರನ್ನಾಗಿ ಹೆಸರಾಂತ ವಕೀಲ,ಹಿಂದುಳಿದ ವರ್ಗಗಳ ಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ,ಹಿಂದುಳಿದ ಬೇಡ ಜನಾಂಗದ ಎಲ್.ಜಿ.ಹಾವನೂರ್ ಅವರನ್ನು ನೇಮಕ ಮಾಡಿದರು.
ಸುಮಾರು ಮೂರು ವರುಷಗಳ ಕಾಲದ ಅವಿಶ್ರಾಂತ ಶ್ರಮದ ಫಲವಾಗಿ ಅನೇಕ ಶಿಫಾರಸುಗಳನ್ನು ಒಳಗೊಂಡ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹಾದಿ ತೋರುವ ವರದಿಯನ್ನು ಹಾವನೂರರು ಸರ್ಕಾರಕ್ಕೆ ಸಲ್ಲಿಸಿದರು.
ವರದಿಯಲ್ಲಿ,ಧರ್ಮ ಮತ್ತು ಸಾಮಾಜಿಕ ನ್ಯೂನತೆ,ಆರ್ಥಿಕ ಪರಿಸ್ಥಿತಿ;ಶಿಕ್ಷಣ, ಉದ್ಯೋಗ,ರಾಜಕೀಯ ಸ್ಥಾನಮಾನ,ವಸತಿ,ಕಲೆ-ಸಂಸ್ಕೃತಿಗಳೇ ಮುಂತಾದ ಪ್ರಶ್ನಾವಳಿ ಗೋಳನ್ನು ಹಾವನೂರ ಅಂಡ್ ಟೀಮ್ ರೂಪಿಸಿತು. ರಾಜ್ಯಾದ್ಯಂತ 783 ವಿವಿಧ ಕ್ಷೇತ್ರಗಳ ಗಣ್ಯರನ್ನು ಮತ್ತು ಸಂಘ ಸಂಸ್ಥೆಗಳನ್ನು ಸಂದರ್ಶಿಸಿ ಉತ್ತರಗಳನ್ನು ಪಡೆಯಲಾಯಿತು.
ಆಯೋಗವು ಪ್ರತಿ ತಾಲೂಕಿಗೆ ಕನಿಷ್ಟ ಒಂದು ಗ್ರಾಮದಂತೆ ಸರಿಸುಮಾರು ೧೯೩ ಗ್ರಾಮಗಳಿಗೆ ಭೇಟಿ ನೀಡಿತು.ನಂತರ ಗ್ರಾಮೀಣ,ಪಟ್ಟಣ,ಪುರಸಭಾ ವ್ಯಾಪ್ತಿಗಳಲ್ಲಿ ಯಾರೂ ಸಹ 204 ಬ್ಲಾಕ್ ಗಳನ್ನು ಆಯ್ಕೆಮಾಡಿಕೊಂಡು, ಒಟ್ಟು 355 000 ಜನಸಂಖ್ಯೆಯನ್ನು ಗೊಂಡ 63 650 ಕುಟುಂಬಗಳು ಸಮೀಕ್ಷೆ ಮಾಡಲಾಯಿತು. ಸಮೀಕ್ಷೆಯಲ್ಲಿ 171 ವಿವಿಧ ಜಾತಿ ಬುಡಕಟ್ಟುಗಳು ಮತ್ತು ಕೋಮುಗಳು ಗುರುತಾದವು.
ಹಾವನೂರು ಆಯೋಗವು,ಲೋಕಸಭೆ,ರಾಜ್ಯಸಭೆ ,ವಿಧಾನಸಭೆ,ವಿಧಾನಪರಿಷತ್ತಿನ ಸದಸ್ಯರು,ತಾಲೂಕು ಬೋರ್ಡಿನ ಸದಸ್ಯರು,ಗ್ರಾಮ ಪಂಚಾಯಿತಿ, ಪುರಸಭೆ, ಮಂಡಳಿಗಳು, ವಕೀಲರು, ವೈದ್ಯರು, ಸಮಾಜ ಸೇವಕರು ,ಮಾಜಿ ಮಂತ್ರಿಗಳು, ಮಾಜಿ ಶಾಸಕರುಗಳು…ಹೀಗೆ ಮಾಹಿತಿಗಳನ್ನು ಸಂಗ್ರಹಿಸಿತು. ಹಾಗೆಯೇ ಹಾವನೂರರು ಕ್ಷಿಪ್ರಗತಿಯಲ್ಲಿ ಪ್ರವಾಸ ಕೈಗೊಂಡು ಜಾತಿ-ಕೋಮುಗಳಿಗೆ ಸಂಬಂಧಿಸಿದ ಸಂಘ ಸಂಸ್ಥೆಗಳನ್ನು ಸಹ ಭೇಟಿ ಮಾಡಿ,ಅವುಗಳ ಸಾಮಾಜಿಕ,ಆರ್ಥಿಕ ಚಟುವಟಿಕೆಗಳನ್ನು ಅರಿತುಕೊಂಡರು.ಈ ನಿಟ್ಟಿನಲ್ಲಿ 365 ಗಣ್ಯರ ಹೇಳಿಕೆಗಳನ್ನೂ ಸಹ ದಾಖಲಿಸಿರುವುದು ಆಯೋಗದ ವಿಶೇಷತೆಯಾಗಿದೆ.
Follow Us On facebook: Dinamaana Facebook
ಮಾರ್ಚ್ 31 , 1972 ಕ್ಕೆ ಅನ್ವಯಿಸಿ ಹೇಳುವುದಾದರೆ, ಒಟ್ಟು 98 ವಿವಿಧ ಇಲಾಖೆಗಳು,ಸಂಸ್ಥೆ ನಿಗಮ ಮಂಡಳಿಗಳಲ್ಲಿ ಕೆಲಸಮಾಡುತ್ತಿರುವವರ ಸೇವಾ ವಿವರಗಳನ್ನೂ ಸಂಗ್ರಹಣೆ ಮಾಡಲಾಯಿತು.ಅಂದಿಗೆ ಕರ್ನಾಟದಲ್ಲಿ ವಿವಿಧ ಜಾತಿಗಳ ಶೇಕಡಾವಾರು ಅಂದಾಜು ಜನಸಂಖ್ಯೆ ಮತ್ತು ಅವು ಹೊಂದಿರುವ ಶೇಕಡಾವಾರು ಪ್ರಾತಿನಿಧ್ಯವನ್ನು ಆಯೋಗವು ಗಮನಿಸಿ ದಾಖಲಿಸಿಕೊಂಡಿತು.
ಈ ಅಧ್ಯಯನದ ನಡುವೆ ಎಲ್.ಜಿ.ಹಾವನೂರರು ಮನೆ ಮತ್ತು ಕುಟುಂಬವನ್ನು ಮರೆತು, ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿ ದರು.ಒಟ್ಟು ಒಂದು ಅಂದಾಜಿನ ಪ್ರಕಾರ, ಮುಖ್ಯವಾಹಿನಿಯಲ್ಲಿ ದ್ದ 89 ವಿವಿಧ ಜಾತಿಗಳ ಪೈಕಿ ಅದರಲ್ಲಿದ್ದ 21 ಬಹುಸಂಖ್ಯಾತ ಜಾತಿಗಳು ಸಾಕಷ್ಟು ಪ್ರಾತಿನಿಧ್ಯವನ್ನು ಪಡೆದುಕೊಂಡಿರುವುದು ನನ್ನು ಆಯೋಗವು ಗಮನಿಸಿತು. ಬ್ರಾಹ್ಮಣ, ಬಂಟ, ಕೊಡುವ, ಕ್ಷತ್ರಿಯ, ರಜಪೂತ, ವೈಶ್ಯ, ಕ್ರೈಸ್ತ, ಜೈನ ಮುಂತಾದ ಜಾತಿಗಳು ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆದಿರುವುದನ್ನು ಹಾವನೂರರು ದಾಖಲಿಸಿದರು.
ಹಾವನೂರು ವರದಿ ಜಾರಿಗೆ
1972 ರ ಮಾರ್ಚ್ ತಿಂಗಳಿನಲ್ಲಿ ಬಂದ ರಾಜ್ಯದ ಎಸ್.ಎಸ್.ಎಲ್.ಸಿ.ಫಲಿತಾಂಶವನ್ನೂ ಸಹ ಹಾವನೂರರು ಅಧ್ಯಯನಕ್ಕೆ ಒಳಪಡಿಸಿದರು.ಇದಕ್ಕಾಗಿ ಅವರು ೧೮೬೯ ಹೈಸ್ಕೂಲುಗಳಿಗೆ ಭೇಟಿ ನೀಡಿದರು. ಆ ವರ್ಷದಲ್ಲಿ ಉತ್ತೀರ್ಣರಾದರು ಸಂಖ್ಯೆಯ ಪ್ರತಿ 1000 ಕ್ಕೆ ಕೇವಲ 1.69 ಆಗಿತ್ತು.ಇದಕ್ಕಿಂತ ಕೆಳಗೆ ಇದ್ದ, ಜಾತಿ ಕೋಮುಗಳೆಲ್ಲ ಶೈಕ್ಷಣಿಕವಾಗಿ ಹಿಂದುಳಿದಿರುವುವು ಎಂದು ತೀರ್ಮಾನಿಸಲಾಯಿತು. ಈ ಪರೀಕ್ಷಾ ವಿಧಾನದಲ್ಲಿಯೂ ಸಹ ,ಬ್ರಾಹ್ಮಣ, ಬಂಟ, ಕೊಡವ, ಕ್ಷತ್ರಿಯ, ಲಿಂಗಾಯತ, ಮರಾಠಿ,ಮೊದಲಿಯಾರ್,ವೈಶ್ಯ,ಕ್ರೈಸ್ತ,ಸಿಖ್ ಮುಂತಾದ ಹದಿನೆಂಟು ಮೇಲ್ವರ್ಗಗಳ ಮಕ್ಕಳೇ ಮೇಲುಗೈ ಸಾಧಿಸಿದ್ದನ್ನು ಆಯೋಗವು ಗುರುತಿಸಿತು.
ಸಾಮಾಜಿಕ ಹಿಂದುಳಿದಿರುವಿಕೆ
ಬಹಳ ವೈಜ್ಞಾನಿಕವಾದ ರೀತಿಯಲ್ಲಿ ಅಧ್ಯಯನಕ್ಕೆ ತೊಡಗಿದ್ದ ಎಲ್.ಜಿ.ಹಾವನೂರರಿಗೆ ಮೊದಮೊದಲಿಗೆ ರಾಜ್ಯದ ಉನ್ನತ ಅಧಿಕಾರಿಗಳು ಸಹಕರಿಸಲೇ ಇಲ್ಲ. ಆಗ ಸಿ.ಎಂ.ಅರಸು ಅವರ ಮುಂದೆ ಹಾವನೂರರು ಹಿಂದುಳಿದ ವರ್ಗಗಳ ಆಯೋಗಕ್ಕೆ ರಾಜ್ಯ ಸಾಂವಿಧಾನಿಕ ಹುದ್ದೆಯ ರೀತಿಯಲ್ಲಿ ಕೆಲವು ಅಧಿಕಾರವನ್ನು ನೀಡುವಂತೆ ಕೋರಿದ ಮನವಿಗೆ ಕೂಡಲೇ ಸ್ಪಂದಿಸಿದರು. ಅದರಂತೆ ಅವಿರತ ಪ್ರವಾಸ,ಅಧ್ಯಯನಗಳಿಂದ ತುಸು ಬಳಲಿದರೂ ಬಿಡದೆ ಆಯೋಗದ ಕೆಲಸಗಳಲ್ಲಿ ಹಾವನೂರರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.
ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಜಾತಿ,ಅದು ಹೊಂದಿರುವ ಅಂತಸ್ತಿನ ಮೇಲೆ ನಿರ್ಧರಿತವಾಗುತ್ತದೆ.ವಾಸ ಮಾಡುವ ಸ್ಥಳ,ದುರ್ಬಲವಾದ ಆರ್ಥಿಕ ಸ್ಥಿತಿ, ಭೂಮಿ, ಮನೆ ಹೊಂದಲು ಕಷ್ಟವಾದೀತು ಪರಿಸ್ಥಿತಿ,ಕಾಯಕ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೇ ಇರುವುದು ಇವೇ ಮೊದಲಾದ ಸಮಸ್ಯೆಗಳು ಕಡೆಗೆ ಬೆಳಕು ಚೆಲ್ಲಿದರು. ಕಸುಬುಗಳನ್ನು ಅಶುಚಿ ಮತ್ತು ಕೀಳುಮಟ್ಟದವು ಎಂದು ಪರಿಗಣಿಸುವ ಮೇಲ್ವರ್ಗಗಳ ಕೀಳಾಗಿ ಕಾಣುವ ಮನೋಭಾವವು ಪೂರ್ವಗ್ರಹಪೀಡಿತವಾದುದಾಗಿದೆ.
ಧಾರ್ಮಿಕ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮೇಲ್ವರ್ಗಗಳು ಒಡನಾಟ ಹೊಂದಿಲ್ಲದಿರುವುದನ್ನು ಆಯೋಗವು ಗುರುತಿಸಿತು.ಸಾಮಾಜಿಕ ನ್ಯೂನತೆಯಿಂದಾಗಿ ಮೇಲ್ವರ್ಗಗಳ ಜನರೊಂದಿಗೆ ಸಹಪಂಕ್ತಿ ಭೋಜನ ಮತ್ತು ಅಂತರ್ಜಾತಿ ವಿವಾಹಗಳು ಸುಲಭವಾಗಿರದೇ ಇರುವುದು,ಇವೇ ಮುಂತಾದ ಕಳಂಕಗಳು ಸಮಾಜದ ಅಸಮಾನತೆಗಳಿಗೆ ಮಾನದಂಡವಾಗಿದೆ.
ಅಂತಿಮವಾಗಿ, ಹಾವನೂರು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ..ತನ್ನ ಆಳವಾದ ಬಹುಶಿಸ್ತೀಯ ಅಧ್ಯಯನದಿಂದ ರೂಪಾಂತರಗೊಂಡ 1975 ರ ನವೆಂಬರ್ 19 ರಂದು ಸರ್ಕಾರಕ್ಕೆ ಸಲ್ಲಿಸಲಾಯಿತು. ವಿವಿಧ ಉಪಜಾತಿಗಳನ್ನೊಳಗೊಂಡ “ಹಿಂದುಳಿದ ಸಮುದಾಯ”ದವರಿಗೆ (ಬಿಸಿಎಂ)ಶೇಕಡ 6 ,ಹಿಂದುಳಿದ ಜಾತಿಗಳಿಗೆ ಶೇ.10,ಹಿಂದುಳಿದ ಬುಡಕಟ್ಟುಗಳಿಗೆ ಶೇ.೬ರಷ್ಟು ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣಕ್ಕೆ ಅನ್ವಯ ಆಗುವಂತೆ ನೀಡಲು ಮಾಡಿದ ಶಿಫಾರಸುಗಳಲ್ಲಿ ಅರಸು ನೇತೃತ್ವದ ಸರ್ಕಾರವು ಮುಸ್ಲಿಂ ಸಮುದಾಯವನ್ನು ಸೇರಿಸಿ ಹಿಂದುಳಿದ ಸಮುದಾಯಗಳ ಮೀಸಲಾತಿಯನ್ನು ಶೇ.20 ಕ್ಕೆ ಏರಿಸಲಾಯಿತು.
ಅರಸು ಅವರು ವರದಿಯಲ್ಲಿ ಇಲ್ಲದೇ ಇದ್ದ ‘ಹಿಂದುಳಿದ ವಿಶೇಷ ಗುಂಪು’ಎಂಬುದನ್ನು ಹೊಸದಾಗಿ ಸೇರಿಸಿದರು. ಎಲ್ಲ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.5 ರಷ್ಟು ಮೀಸಲಾತಿಯ ಪ್ರಾತಿನಿಧ್ಯವನ್ನು ಕಲ್ಪಿಸಿದರು.
ಹೀಗೆ ಕೆಲವು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಮುಖ್ಯಮಂತ್ರಿ ಅರಸುರವರು ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿಯನ್ನು 1977 , ಫೆಬ್ರುವರಿ 22 ರಂದು ಜಾರಿಗೊಳಿಸಿದರು.
ಬಿ.ಶ್ರೀನಿವಾಸ . ದಾವಣಗೆರೆ
Read also : LG Havanur | ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಎಲ್.ಜಿ.ಹಾವನೂರು